ಮೇಲಂತಬೆಟ್ಟು: ಬೆಳ್ತಂಗಡಿ ತಾಲೂಕಿನ ಕಾರಣಿಕ ಕ್ಷೇತ್ರ ಹಾಗೂ ಊರು-ಪರವೂರುಗಳಲ್ಲಿ ಅಪಾಯ ಭಕ್ತ ಸಮೂಹವನ್ನು ಹೊಂದಿರುವ ಮೇಲಂತಬೆಟ್ಟು ಗ್ರಾಮದ ಶ್ರೀ ದೇವಿ ಭಗವತೀ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಾರಂಭಗೊಂಡಿದ್ದು, ಪ್ರತಿ ದಿನ ಊರ ಹಾಗೂ ಪರವೂರ ಭಕ್ತರಿಂದ ಶ್ರಮದಾನ ಕಾರ್ಯ ನಡೆಯುತ್ತಿದೆ.ಕ್ಷೇತ್ರದಲ್ಲಿ ಶ್ರೀ ದೇವಿ ಭಗವತೀ ಅಮ್ಮನವರು, ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ, ಬ್ರಹ್ಮ ಶ್ರೀ ನಾರಾಯಣ ಗುರುಗಳು ಹಾಗೂ ಕಾರಣಿಕ ದೈವ ಅಗ್ನಿಗುಳಿಗನ ಆರಾಧನೆಯೂ ನಡೆಯುತ್ತಿದೆ.ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆದು 12 ವರ್ಷಗಳು ಕಳೆದಿದ್ದು, ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಮತ್ತೆ ಬ್ರಹ್ಮಕಲಶೋತ್ಸವ ನಡೆಸಲು ಭಕ್ತರು
ಸಂಕಲ್ಪ ಮಾಡಿದ್ದು, ಕ್ಷೇತ್ರದಲ್ಲಿ ನಡೆದ `ಅಷ್ಟಮಂಗಳ’ ಚಿಂತನೆಯಲ್ಲಿ ಕಂಡು ಬಂದಂತೆ ಶ್ರೀ ದೇವಿ ಭಗವತೀ ಅಮ್ಮನವರ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ.
ಇದೀಗ ಜೀಣೋದ್ಧಾರ ಕಾರ್ಯಗಳು ಆರಂಭಗೊಂಡಿದ್ದು, ಸುತ್ತುಪೌಳಿಯ ಕೆಲಸ ನಡೆಯುತ್ತಿದೆ. ಊರ ಹಾಗೂ ಪರವೂರುಗಳಿಂದ ಪ್ರತಿ ದಿನ ಭಕ್ತರು ಆಗಮಸಿ ಶ್ರಮದಾನದ ಕಾರ್ಯವನ್ನು
ನಡೆಸುತ್ತಿದ್ದಾರೆ. ಶ್ರೀ ದೇವಿ ಭಗವತೀ ಅಮ್ಮನವರಿಗೆ ಪಾಣಿ ಪೀಠ, ಶ್ರೀ ಮಹಾಗಣಪತಿ ದೇವರಿಗೆ ನೂತನ ಗುಡಿ ನಿರ್ಮಾಣ, ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಮರದ ಪೀಠ, ಕಾಲಭೈರವನ ಕಟ್ಟೆ, ದೇವಸ್ಥಾನದ ಸುತ್ತು ಪೌಳಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸುಮಾರು ರೂ.60 ಲಕ್ಷ ವೆಚ್ಚದಲ್ಲಿವಾಗಬಹುದೆಂದು ಅಂದಾಜಿಸಲಾಗಿದ್ದು, ಭಕ್ತರು ಈ ಪುಣ್ಯ ಕಾರ್ಯಕ್ಕೆ ತನು, ಮನ, ಧನ ಧಾನ್ಯಗಳಿಂದ ಸಹಕರಿಸುವಂತೆ ಧರ್ಮದರ್ಶಿ ಯೋಗೀಶ್ ಪೂಜಾರಿ ವಿನಂತಿಸಿದ್ದಾರೆ.