ಬೆಳ್ತಂಗಡಿ: ಇತ್ತಿಚೇಗೆ ಭಜರಂಗದಳದ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ಪತ್ರಿಕಾಗೋಷ್ಠಿಯಲ್ಲಿ ನನ್ನನ್ನು ಆಣೆ ಪ್ರಮಾಣಕ್ಕೆ ಕರೆದು ಸವಾಲು ಹಾಕಿದ್ದಾರೆ. ಭಾಸ್ಕರ್‌ನಂತಹ ವ್ಯಕ್ತಿಗೆ ನನ್ನನ್ನು ಆಣೆಪ್ರಮಾಣಕ್ಕೆ ಕರೆಯುವ ಯೋಗ್ಯತೆಯೇ ಇಲ್ಲ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದ್ದಾರೆ.
ಅವರು ಮಾ.16ರಂದು ಬೆಳ್ತಂಗಡಿ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಭಾಸ್ಕರ್ ಧರ್ಮಸ್ಥಳದಲ್ಲಿ ಆನೇಕ ವರ್ಷಗಳಿಂದ ವಾಸವಿದ್ದಾರೆ. ಆತ ಯಾವ ರೀತಿಯಲ್ಲಿ ಇಷ್ಟು ವರ್ಷ ಇದ್ದ ಎಂಬುದು ಮಂಜುನಾಥ ಸ್ವಾಮಿಗೆ ತಿಳಿದಿದೆ. ನಾನು ಹೇಳುವುದೆನೆಂದರೆ `ನಾನು ತಪ್ಪು ಮಾಡಿದ್ದಲ್ಲಿ ನನಗೆ ಪ್ರಾಯಶ್ಚಿತ ನೀಡಬೇಕಾಗಿ ಮಂಜುನಾಥ ಸ್ವಾಮಿಯಲ್ಲಿ ಮತ್ತು ಕಾನತ್ತೂರಿನ ನಾಲ್ವರ್ ದೈವಗಳಲ್ಲಿ ಪ್ರಾರ್ಥಿಸುತ್ತೇನೆ. ಅದೇ ರೀತಿ ಭಾಸ್ಕರ ಧರ್ಮಸ್ಥಳ ತಪ್ಪು ಮಾಡಿದಲ್ಲಿ ಅವರಿಗೆ ಪ್ರಾಯಶ್ಚಿತ ನೀಡಬೇಕಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ವ್ಯಾಪಕ ಭ್ರಷ್ಟಾಚಾರ ತಾಲೂಕು
ಕಚೇರಿಗೆ ಮುತ್ತಿಗೆ ಹಾಕುತ್ತೇವೆ:
ಅಕ್ರಮ-ಸಕ್ರಮ ಯೋಜನೆಯ ಕಡತ ತಯಾರಿಯಲ್ಲಿ ತಹಶೀಲ್ದಾರ್ ಸಹಿತ ತಾಲೂಕು ಕಚೇರಿಯ ಕೆಲ ಅಧಿಕಾರಿಗಳಿಂದ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಅದೇ ರೀತಿಯಲ್ಲಿ ಅಕ್ರಮ-ಸಕ್ರಮದಲ್ಲಿ ಪಕ್ಷಪಾತ ಧೋರಣೆ ನಡೆಸುತ್ತಾ ಪಾರದರ್ಶಕತೆ ಇಲ್ಲದೆ ಗುಟ್ಟಿನಲ್ಲಿ ತಾಲೂಕು ಕಚೇರಿ ಸಭಾಂಗಣದ ಬಾಗಿಲು ಮುಚ್ಚಿ ಬೈಠಕ್ ನಡೆಯುತ್ತಿರುವ ದೂರು ನನಗೆ ಬಂದಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ, ಕಂದಾಯ ಸಚಿವರು, ಜಿಲ್ಲಾಧಿಕಾರಿ ಮತ್ತು ಪುತ್ತೂರು ಸಹಾಯಕ ಆಯುಕ್ತರಿಗೆ ದೂರು ನೀಡಲಿದ್ದೇನೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸದಿದ್ದಲ್ಲಿ ಬೈಠಕ್ ನಡೆಯುವ ಸಂದರ್ಭದಲ್ಲೇ ಕಾಂಗ್ರೆಸ್ ಪಕ್ಷದ ವತಿಯಿಂದ ತಾಲೂಕು ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದರು.
ಕೆಮಿಕಲ್ ಸೋರಿಕೆ ಸಂಶಯ
ಸೂಕ್ತ ತನಿಖೆ ನಡೆಯಲಿ:
ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿರುವ ಕೆರೆಗೆ ದುಷ್ಕರ್ಮಿಗಳು ವಿಷ ಹಾಕಿ ಮೀನುಗಳ ಮಾರಣ ಹೋಮ ನಡೆಸಿದ್ದಾರೆ. ಇದು ಯಾವುದೋ ಕೆಮಿಕಲ್ ಸೋರಿಕೆಯಾಗಿ ಈ ರೀತಿಯಾಗಿದೆ ಎಂಬ ಸಂಶಯ ವ್ಯಕ್ತವಾಗಿದ್ದು, ಇದರ ಬಗ್ಗೆ ಎ.ಸಿ ಹಾಗೂ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಂಗೇರ ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ಗ್ರಾಮೀಣ ಅಧ್ಯಕ್ಷ ರಂಜನ್ ಜಿ. ಗೌಡ, ನ್ಯಾಯವಾದಿ ಮನೋಹರ ಕುಮಾರ್ ಇಳಂತಿಲ ಉಪಸ್ಥಿತರಿದ್ದರು.