ಬೆಳ್ತಂಗಡಿ: ಅರಣ್ಯ ಸಂಚಾರಿ ದಳ ಉಡುಪಿ ವಲಯದ ಅರಣ್ಯಾಧಿಕಾರಿ ಹಾಗೂ ದ.ಕ ಜಿಲ್ಲಾ ಅರಣ್ಯ ಸಂಚಾರಿ ದಳದ ಪ್ರಭಾರ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಧ್ಯಾ ಸಚಿನ್ ಅವರ ವರ್ಗಾವಣೆಗೆ
ಕೆ.ಎ.ಟಿ ತಡೆ ನೀಡಿದೆ.
ಕಲ್ಮಂಜ ಗ್ರಾಮದ ಕಜೆ ಎಂಬಲ್ಲಿ ಅಕ್ರಮವಾಗಿ ಮರ ಕಡಿದ ಪ್ರಕರಣದ ಬಗ್ಗೆ ಕೇಸು ದಾಖಲಿಸಿದ ಪ್ರಕರಣದ ನಂತರ ನಡೆದ ಬೆಳವಣಿಗೆಯಲ್ಲಿ ಸಂಧ್ಯಾ ಸಚಿನ್ ಅವರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಈ ತಕ್ಷಣದಿಂದ ಜಾರಿಗೆ ಬರುವಂತೆ ಬೀದರ್‌ನ ಅರಣ್ಯ ತರಬೇತಿ ಕೇಂದ್ರಕ್ಕೆ ವರ್ಗಾವಣೆಗೊಳಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ರವರು ಫೆ.2ರಂದು ಆದೇಶ ನೀಡಿದ್ದರು.
ಕಲ್ಮಂಜ ಗ್ರಾಮದ ಕಜೆ ಎಂಬಲ್ಲಿಯ ಐತ ಎಂಬವರ ಜಾಗದಲ್ಲಿದ್ದ ಮರಕಡಿದ ಪ್ರಕರಣದ ವಿರುದ್ಧ ಕ್ರಮ ಕೈಗೊಂಡ ಕಾರಣಕ್ಕಾಗಿ ಅವರನ್ನು ಬೀದರ್ ಜಿಲ್ಲೆಗೆ ವರ್ಗಾಯಿಸುವಂತೆ ಶಾಸಕ ಹರೀಶ್ ಪೂಂಜ ರಾಜ್ಯದ ಮುಖ್ಯಮಂತ್ರಿಗಳಿಗೆ ಶಿಪಾರಸ್ಸು ಮಾಡಿದ್ದಾರೆ ಎಂದು ಆರೋಪಿಸಿ, ಅಧಿಕಾರಿ ಸಂಧ್ಯಾ ಸಚಿನ್ ಅವರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಿಗೆ ಈ ಹಿಂದೆ ದೂರು ನೀಡಿದ್ದರು. ಶಾಸಕ ಹರೀಶ್ ಪೂಂಜ ಅವರು ಮುಖ್ಯಮಂತ್ರಿಗಳಿಗೆ ಬರೆದರೆನ್ನಲಾದ ಪತ್ರ ಜೊತೆಗೆ ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷರ ಪತ್ರವೂ ಇತ್ತಿಚೇಗೆ ವೈರಲ್ ಆಗಿತ್ತು. ಈ ಎಲ್ಲಾ ಬೆಳವಣಿಗೆಗಳು ನಡೆದು ಒಂದು ವಾರವಾಗುತ್ತಿದ್ದಂತೆ ಸಂಧ್ಯಾ ಸಚಿನ್ ಅವರ ವರ್ಗಾವಣೆ ಆದೇಶವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವರ್ಗಾವಣೆ ಆದೇಶಕ್ಕೆ ಬ್ರೇಕ್
ಹಿಂದಿನ ಹುದ್ದೆಗೆ ಮರು ನೇಮಕ
ತನ್ನ ವರ್ಗಾವಣೆ ಆದೇಶದ ಬಗ್ಗೆ ಸಂಧ್ಯಾ ಸಚಿನ್ ಬೆಂಗಳೂರಿನ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಗೆ ನೀಡಿದ ದೂರಿನ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿದ ನ್ಯಾಯಮಂಡಳಿ ಸರಕಾರ ರಾಜಕೀಯ ಪ್ರೇರಿತವಾಗಿ ವರ್ಗಾವಣೆ ಮಾಡಿದೆ. ವರ್ಗಾವಣೆಯಲ್ಲಿ ನೀತಿ-ನಿಯಮ ಪಾಲಿಸಿಲ್ಲ, ಎಂದು ಪರಿಗಣಿಸಿ ಸಂಧ್ಯಾ ಸಚಿನ್ ಅವರ ವರ್ಗಾವಣೆ ಆದೇಶಕ್ಕೆ ತಡೆ ನೀಡಿ, ಅವರನ್ನು ಈ ಹಿಂದೆ ಇದ್ದ ಹುದ್ದೆಗೆ ಮರುನೇಮಕಗೊಳಿಸುವಂತೆ ಆದೇಶ ನೀಡಿರುವುದಾಗಿ ವರದಿಯಾಗಿದೆ.