ಬೆಳ್ತಂಗಡಿ: ಕೃಷಿ ಇಲಾಖೆ ಬೆಳ್ತಂಗಡಿ ಇದರ ವತಿಯಿಂದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ 75 ಮಂದಿ ಅರ್ಹ ರೈತ ಫಲಾನುಭವಿಗಳಿಗೆ ಟಾರ್ಪ್‌ಲಿನ್ ವಿತರಣಾ ಕಾರ್ಯಕ್ರಮವು ಸೆ.6ರಂದು ಶ್ರಮಿಕ ಕಚೇರಿ ವಠಾರದಲ್ಲಿ ಜರುಗಿತು.
ಶಾಸಕ ಹರೀಶ್ ಪೂಂಜ ರೈತರಿಗೆ ಟಾರ್ಪ್‌ಲಿನ್ ವಿತರಿಸಿ ಮಾತನಾಡಿ, ಸ್ವಾತಂತ್ರೋತ್ಸವ ಅಮೃತಮಹೋತ್ಸವದ ಅಂಗವಾಗಿ ತಾಲೂಕಿನಲ್ಲಿ 75 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಕಲ್ಪ ಮಾಡಿದ್ದು, ಇದರಂತೆ ಇಂದು ಕೃಷಿ ಇಲಾಖೆಯಿಂದ 75 ಮಂದಿ ರೈತರಿಗೆ ಟಾರ್ಪ್‌ಲಿನ್ ವಿತರಿಸಲಾಗಿದೆ. ಸರಕಾರದ ವಿವಿಧ ಇಲಾಖೆಗಳ ಮೂಲಕ 75 ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಾಲೂಕಿನ 5600ಕ್ಕಿಂತಲೂ ಹೆಚ್ಚು ಜನರಿಗೆ ಸರಕಾರದ ಒಂದಿಲ್ಲೊಂದು ಸೌಲಭ್ಯವನ್ನು ತಲುಪಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ರಂಜಿತ್, ಇಂದಬೆಟ್ಟು ಗ್ರಾ.ಪಂ ಅಧ್ಯಕ್ಷ ಆನಂದ ಹಡೀಲ್, ತಣ್ಣೀರುಪಂತ ಗ್ರಾ.ಪಂ ಸದಸ್ಯ ರುಕೇಶ್, ಕಳೆಂಜ ಗ್ರಾ.ಪಂ ಸದಸ್ಯ ಹರೀಶ್, ಕೃಷಿ ಅಧಿಕಾರಿ ಚಿದಾನಂದ ಹೂಗಾರ್, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ರೈತ ಫಲಾನುಭವಿಗಳು ಉಪಸ್ಥಿತರಿದ್ದರು.