*
*ಅಸ್ವಸ್ಥೆ ವೃದ್ಧೆಯನ್ನು ಮರದ ಬೆಂಚಿಗೆ ಕಟ್ಟಿ ತಲೆಮೇಲೆ ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ ಮನೆಯವರು*
*ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ ವೀಡಿಯೊ*
ಕೊಯ್ಯೂರು: ಕೊಯ್ಯೂರು ಗ್ರಾಮದ ಕೆರೆಹಿತ್ಲು ಎಂಬಲ್ಲಿರುವ ೫ ಮನೆಗಳಿಗೆ ಸುಮಾರು ೨೦೦ಮೀ ವ್ಯಾಪ್ತಿಯಲ್ಲಿ ರಸ್ತೆ ಸಂಪರ್ಕ ವ್ಯವಸ್ಥೆಯಿಲ್ಲದೆ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಇತ್ತೀಚೆಗೆ ಕೆರೆಹಿತ್ಲು ನಿವಾಸಿ ವೃದ್ಧೆ ಕಮಲಾ ಎಂಬವರು ಅಸ್ವಸ್ಥರಾಗಿದ್ದು, ನಡೆಯಲೂ ಆಗದೆ ಚಿಂತಾಜನಕ ಸ್ಥಿತಿಯಲ್ಲಿದ್ದರು. ಮೊದಲೇ ರಸ್ತೆ ಸಂಪರ್ಕದಿಂದ ಸಮಸ್ಯೆಗೆ ಸಿಲುಕಿರುವ ಈ ಮನೆಯವರು ಬೇರೆ ದಾರಿ ಕಾಣದೆ ಅನಾರೋಗ್ಯಪೀಡಿತೆ ಕಮಲಾರನ್ನು ಮರದ ಬೆಂಚೊಂದಕ್ಕೆ ಕಟ್ಟಿ ಇಬ್ಬರು ಯುವಕರು ತಲೆ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವೃದ್ಧೆಯನ್ನು ಬೆಂಚಿನಲ್ಲಿ ಮಲಗಿಸಿ ತಲೆಮೇಲೆ ಹೊತ್ತು ಸಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿ ಸುದ್ದಿಮಾಡಿದೆ.ಕೆರೆಹಿತ್ಲು ಪ್ರದೇಶದಲ್ಲಿರುವ ಸುಮಾರು ೫ ಮನೆಗಳಿಗೆ ರಸ್ತೆ ಸಂಪರ್ಕ ಇಲ್ಲ. ರಸ್ತೆ ಕಲ್ಪಿಸಬೇಕಾದಲ್ಲಿ ಖಾಸಗಿಯೊಬ್ಬರ ಪಟ್ಟಾಜಾಗ ಬರುತ್ತದೆ. ಇದರಿಂದ ರಸ್ತೆ ನಿಮಿ೯ಸಲು ಸಮಸ್ಯೆ ಯಾದ ಕಾರಣ ಸ್ಥಳೀಯರು ಮೂಲಭೂತ ಸೌಕರ್ಯವಾದ ರಸ್ತೆ ಸಂಪರ್ಕದಿಂದ ವಂಚಿತರಾಗಿದ್ದಾರೆ.
ತಮ್ಮ ಮನೆಗಳಿಗೆ ಯಾವುದೇ ಸರಕು ಸಾಮಾನುಗಳು, ದಿನಸಿ, ಆಹಾರ ಸಾಮಾಗ್ರಿಗಳನ್ನು ಹಾಗೂ ಇತರೆ ವಸ್ತುಗಳನ್ನು ತಲೆ ಮೇಲೇಯೇ ಹೊತ್ತು ತರಬೇಕಾದಂತಹ ದುಃಸ್ಥಿತಿ ನಿರ್ಮಾಣವಾಗಿದೆ.