ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲೆಯಾದ್ಯಂತ ಕೃಷಿಯೇತರ ಚಟುವಟಿಕೆಗಳಿಗಾಗಿ ಭೂಪರಿವರ್ತನೆಗೆ ಸ್ಥಳೀಯ ಪ್ರಾಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರ ಹಾಗೂ 11-ಇ ನಕ್ಷೆಗಳನ್ನು ಹಾಜರುಪಡಿಸುವುದು ಕಡ್ಡಾಯವಾಗಿತ್ತ್ತ್ತು.
ಆದರೆ ಈಗ ಭೂಪರಿವರ್ತನೆಗೆ ಸ್ಥಳೀಯ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ ಹಾಗೂ ಸರ್ವೆ ಇಲಾಖೆಯಿಂದ 11-ಇ ನಕ್ಷೆ ಹಾಜರುಪಡಿಸುವ ಅಗತ್ಯವಿಲ್ಲ ಎಂದು ಕರ್ನಾಟಕದ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ.
11- ಇ ನಕ್ಷೆ ಮತ್ತು ಎನ್ ಒಸಿ ಯಿಂದಾಗಿ ಸಾವಿರಾರು ಮಂದಿ ಕನ್ವರ್ಷನ್‌ಗೆ ಸಲ್ಲಿಸಿರುವ ಅರ್ಜಿಗಳು ವಿಲೇವಾರಿಯಾಗದೆ ಬಹಳ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಅಲ್ಲದೆ ಈ ನಿಯಮವು ಕರ್ನಾಟಕ ಭೂಕಂದಾಯ ಕಾಯ್ದೆಯ ಸೆಕ್ಷನ್ ೯೫ಕ್ಕೆ ವಿರುದ್ಧವಾಗಿದೆ ಎಂದು ಜನಸಾಮಾನ್ಯರ ಪರವಾಗಿ ಬೆಳ್ತಂಗಡಿ ಮೂಲದ ಹೈಕೋರ್ಟ್ ನ್ಯಾಯವಾದಿ ಎಸ್. ರಾಜಶೇಖರ್ ಹಾಗೂ ನ್ಯಾಯವಾದಿ ಮಯೂರ ಕೀರ್ತಿಯವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕದ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠ ನ್ಯಾಯಮೂರ್ತಿಗಳಾದ ಬಿ. ನಾಗರತ್ನ ಹಾಗೂ ನ್ಯಾಯಮೂರ್ತಿ ಜೆ.ಎಂ ಖಾಜಿ ರವರು ಇನ್ನು ಮುಂದೆ ಭೂಪರಿವರ್ತನೆಗೆ ಸ್ಥಳೀಯ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ ಹಾಗೂ ಸರ್ವೆ ಇಲಾಖೆಯಿಂದ 11-ಇ ನಕ್ಷೆ ಹಾಜರುಪಡಿಸುವ ಅಗತ್ಯವಿಲ್ಲ ಹಾಗೂ ಈ ನಿಯಮ ಕಾನೂನು ಸಮ್ಮತವಲ್ಲ ಎಂದು ಮಹತ್ವದ ತೀರ್ಪು ನೀಡಿದ್ದಾರೆ.
ಇದರಿಂದಾಗಿ ಸಾರ್ವಜನಿಕರು ಭೂಪರಿವರ್ತನೆಗೆ ಅನುಸರಿಸುತ್ತಿದ್ದ ಕಠಿಣ ನಿಯಮಗಳು ಸಡಿಲಗೊಂಡು, ಜನಸಾಮಾನ್ಯರಿಗೆ ಬಹಳ ಸಹಕಾರಿಯಾಗಿದೆ.