ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸರಕಾರ ರೂ.೨.೧೮ ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಶನ್ ವಿಭಾಗದವರು ಶೀಘ್ರವಾಗಿ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪರವೂರುಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಇಲ್ಲಿಗೆ ಸುಸಜ್ಜಿತ ಪೊಲೀಸ್ ಠಾಣೆಯ ಅಗತ್ಯತೆ ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಬಗ್ಗೆ ಸರಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿತ್ತು. ಕಳೆದ ಕೆಲ ತಿಂಗಳ ಹಿಂದೆ ಉಜಿರೆಯಲ್ಲಿ ನಡೆದ ಸಮಾರಂಭಕ್ಕೆ ಆಗಮಿಸಿದ್ದ ಉಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರಲ್ಲಿ ಶಾಸಕ ಹರೀಶ್ ಪೂಂಜ ಅವರು ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಸರಕಾರ ಧರ್ಮಸ್ಥಳಕ್ಕೆ ನೂತನ ಠಾಣಾ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿದೆ.
ಧರ್ಮಸ್ಥಳಕ್ಕೆ ಪೊಲೀಸ್ ಠಾಣೆ ಮಂಜೂರಾಗಿ ಹಲವು ವರ್ಷಗಳಾಗಿವೆ. ಹಲವು ವರ್ಷ ಖಾಸಗಿ ಕಟ್ಟಡದಲ್ಲಿ ನಂತರ ಈಗ ಪಂಚಾಯತು ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ನೂತನವಾಗಿ ಮಂಜೂರಾದ ಕಟ್ಟಡ ಧರ್ಮಸ್ಥಳದ ಮಹಾದ್ವಾರದಿಂದ ಉಜಿರೆ ಕಡೆ ಬರುವ ರಸ್ತೆ ಬದಿ ಮೀಸಲಾದ ಜಾಗದಲ್ಲಿ ನಿರ್ಮಾಣವಾಗಲಿದೆ. ಈ ಠಾಣೆಯನ್ನು ಸರ್ಕಲ್ ಇನ್ಸ್‌ಪೆಕ್ಟರ್ ಠಾಣೆಯಾಗಿ ಮೇಲ್ದರ್ಜೆಗೇರಿಸುವ ಯೋಜನೆ ಇದೆ. ಸರಕಾರ ಮಂಜೂರುಗೊಳಿಸಿದ ಅನುದಾನದಿಂದ ವಿನೂತನ ರೀತಿಯಲ್ಲಿ ಮಾದರಿಯಾಗಿ ಕಟ್ಟಡ ನಿರ್ಮಾಣ ಮಾಡಲು ಸೂಚನೆ ನೀಡಲಾಗಿದೆ ಎಂದು ಶಾಸಕ ಹರೀಶ್ ಪೂಂಜ ` ಸುದ್ಧಿಗೆ ‘
ತಿಳಿಸಿದ್ದಾರೆ.