ತಾಲೂಕು ಸುದ್ದಿ

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ವತಿಯಿಂದ 80 ಆಶಾ ಕಾರ್ಯಕರ್ತೆಯರಿಗೆ ರೂ.2.40 ಲಕ್ಷ ಪ್ರೋತ್ಸಾಹಧನ ವಿತರಣೆ

ಅಳದಂಗಡಿ : ಅಳದಂಗಡಿ ಶ್ರೀಸತ್ಯದೇವತಾ ದೈವಸ್ಥಾನದ ವತಿಯಿಂದ ಅಳದಂಗಡಿ ಹಾಗೂ ನಾರಾವಿ ಜಿ.ಪಂ ವ್ಯಾಪ್ತಿಯ 80 ಆಶಾ ಕಾಯ೯ಕತೆ೯ಯರಿಗೆ ತಲಾ ರೂ.3 ಸಾವಿರದಂತೆ ಒಟ್ಟು ರೂ. 2.40 ಲಕ್ಷ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮವು ಮೇ 24 ರಂದು ಅಳದಂಗಡಿ ದೇವಸ್ಥಾನದ ವಠಾರದಲ್ಲಿ ಜರುಗಿತು.


ಸಾಂಕೇತಿಕವಾಗಿ 18 ಮಂದಿ ಆಶಾ ಕಾರ್ಯಕರ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಪ್ರೋತ್ಸಾಹಧನವನ್ನು ವಿತರಿಸಿ, ಮಾತನಾಡಿ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ನಿಮ್ಮ ರಕ್ಷಣೆಗೆ ಜಿಲ್ಲಾಡಳಿತ ಸದಾ ನಿಮ್ಮ ಜೊತೆ ಇರುತ್ತದೆ ಎಂದು ತಿಳಿಸಿದರು. ಆಶಾ ಕಾರ್ಯಕರ್ತೆಯರಿಗೆ ಆಹಾರ ಸಾಮಾಗ್ರಿ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು.
ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಮಾದರಿಯಾಗಿ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು

ಕಾರ್ಯನಿರ್ವಹಿಸುತ್ತಿದ್ದಾರೆ. ಮೂರನೇ ಅಲೆ ಬರುತ್ತದೆ ಎಂಬ ಆತಂಕ ಎಲ್ಲರಿಗಿದೆ. ಸರಕಾರ ಎಂತಹ ಕಠಿಣ ಪರಿಸ್ಥಿತಿ ಬಂದರೂ ಇದನ್ನು ಎದುರಿಸಲು ಬೇಕಾದ ಯೋಜನೆಯನ್ನು ರೂಪಿಸಿದೆ. ಕೊರೊನಾ ವಾರಿಯರ್‍ಸ್‌ಗಳ ಸಂಕಷ್ಟಕ್ಕೆ ಸ್ಪಂದಿಸುವ ಹೃದಯವಂತರಿದ್ದಾರೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ದೈವಸ್ಥಾನದ ಆದಾಯವನ್ನು ಸಮಾಜೋಪಯೋಗಿ ಕಾರ್ಯಕ್ರಮಕ್ಕೆ ನೀಡುವುದು ಶ್ರೇಷ್ಠ ಕಾರ್ಯವಾಗಿದೆ. ಇದು ಆಶಾ ಕಾರ್ಯಕರ್ತೆಯರ ಆತ್ಮಸ್ಥೆರ್ಯವನ್ನು ಹೆಚ್ಚಿಸುವ ಕಾರ್ಯಕ್ರಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ಕೊರೊನಾ ಸೋಂಕು ನಿಯಂತ್ರಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲಾಡಳಿತ ಮಾಡಿದೆ. ೨೪ ಗಂಟೆಯೊಳಗೆ ಕೊರೊನಾ ಟೆಸ್ಟ್ ವರದಿ ಬರುವ ವ್ಯವಸ್ಥೆ ಜಿಲ್ಲೆಯಲ್ಲಿ ಆಗಿದೆ. ಜಿಲ್ಲೆಯ 7 ತಾಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕ ಆರಂಭಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಆಶಾ ಕಾರ್ಯಕರ್ತರ ಬದುಕಿಗೆ ಶಕ್ತಿ ತುಂಬಲು ದೈವಸ್ಥಾನದ ಆದಾಯವನ್ನು ಅವರಿಗೆ ನೀಡುವುದು ಪುಣ್ಯದ ಕಾರ್ಯ, ದ.ಕ ಜಿಲ್ಲೆಯಲ್ಲಿ ಮೊದಲ ಕೊರೊನಾ ಕೇರ್ ಸೆಂಟರ್‌ನ್ನು ಆರಂಭಿಸಿದವರು ಶಾಸಕ ಹರೀಶ್ ಪೂಂಜ ಅವರು ಎಂದು ಪ್ರಶಂಸಿದರು.
ಅಧ್ಯಕ್ಷತೆ ವಹಿಸಿದ್ದ ಅಳದಂಗಡಿ ಅರಮನೆಯ ಅರಸರಾದ ಡಾ. ಪದ್ಮಪ್ರಸಾದ ಅಜಿಲ ಅವರು ಮಾತನಾಡಿ, ಕೊರೊನಾ ನಿಯಂತ್ರಣಕ್ಕೆ ದ.ಕ ಜಿಲ್ಲೆಯಲ್ಲಿ ಗುರುತಿಸುವ ಕಾರ್ಯವನ್ನು ಶಾಸಕರು ಬೆಳ್ತಂಗಡಿಯಲ್ಲಿ ಮಾಡಿದ್ದಾರೆ. ಪ್ರತಿ ಗ್ರಾಮ ಪಂಚಾಯತಕ್ಕೆ ಒಂದು ಅಂಬ್ಯುಲೆನ್ಸ್ ನೀಡಬೇಕು, ಕೊರೊನಾ ಟೆಸ್ಟ್‌ನ್ನು ಹೆಚ್ಚಿಸುವಂತೆ ಅವರು ಸಲಹೆ ನೀಡಿದರು.


ಈ ಸಂದರ್ಭದಲ್ಲಿ ಅಳದಂಗಡಿ ಸರಕಾರಿ ಆಸ್ಪತ್ರೆಗೆ ದೈವಸ್ಥಾನದ ವತಿಯಿಂದ ಮಾಸ್ಕ್, ಸಾನಿಟೈಸರ್ ಸೇರಿದಂತೆ ಜೌಷಧ ಕಿಟ್‌ನ್ನು ವಿತರಿಸಲಾಯಿತು. ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಯ ಮನವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿದರು. ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಉದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಬಿಜೆಪಿ ತಾಲೂಕು ಅಧ್ಯಕ್ಷ ಜಯಂತ ಕೋಟ್ಯಾನ್ ಉಪಸ್ಥಿತರಿದ್ದರು. ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ಆಡಳಿತದಾರ ಶಿವಪ್ರಸಾದ ಅಜಿಲ ಸ್ವಾಗತಿಸಿದರು. ಗ್ರಾ.ಪಂ ಮಾಜಿ ಸದಸ್ಯ

ಮೋಹನ್‌ದಾಸ್ ಕಾರ್ಯಕ್ರಮ ನಿರೂಪಿಸಿ, ಅಳದಂಗಡಿ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ವಂದಿಸಿದರು. ಕಾರ್ಯಕ್ರಮದಲ್ಲಿ ತಾ.ಪಂ ಮಾಜಿ ಸದಸ್ಯ ಸುಧೀರ್ ಆರ್.ಸುವರ್ಣ, ಅಳದಂಗಡಿ ಗ್ರಾ.ಪಂ ಉಪಾಧ್ಯಕ್ಷ ಹರೀಶ್ ಆಚಾರ್ಯ, ಸುಲ್ಕೇರಿ ಗ್ರಾ.ಪಂ ಅಧ್ಯಕ್ಷ ನಾರಾಯಣ ಪೂಜಾರಿ, ಪಿಡಿಒ ರವಿ, ಸಿ.ಎ ಬ್ಯಾಂಕ್ ನಿರ್ದೇಶಕ ಶಶಿಧರ್.ಎ, ಸುಪ್ರಿತ್ ಜೈನ್, ನಿವೃತ್ತ ಪಿಡಿಒ ರಾಜಶೇಖರ್, ಅಳದಂಗಡಿ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ