ನೆರಿಯ: ಕಳೆದ ಒಂಭತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ, ಇಲ್ಲಿಯ ಕೊಲೋಡಿ ನಿವಾಸಿ ತೇಜಸ್ವಿನಿ(23ವ) ಎಂಬ ಯುವತಿಯ ಶವ ಮಾ.೩ರಂದು ಸಮೀಪದ ಕೊಲೋಡಿ ಕಾಡಿನಲ್ಲಿ ಪತ್ತೆಯಾಗಿದೆ.
ಫೆ.22 ರಿಂದ
ನೆರಿಯ ಗ್ರಾಮದ ನಿವಾಸಿ ಮಂಜುನಾಥ ಮತ್ತು ಸುಶೀಲಾ ದಂಪತಿ ಪುತ್ರಿಯಾಗಿರುವ ತೇಜಸ್ವಿನಿಯವರು ಕಳೆದ ನಾಲ್ಕು ವರ್ಷಗಳಿಂದ ಉಜಿರೆ ಪರಿಸರ ನಿವಾಸಿಯೊಬ್ಬರ ಮನೆಯಲ್ಲಿ ಮನೆಕೆಲಸ ಮಾಡಿಕೊಂಡು, ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದು, ಅವರ ಮನೆಯಲ್ಲಿಯೇ ವಾಸ್ತವ್ಯವಿದ್ದರು. ಫೆ.೨೨ರಂದು ಸಂಜೆ ಕಂಪ್ಯೂಟರ್ ಕ್ಲಾಸ್ ಮುಗಿಸಿ ನೆರಿಯದಲ್ಲಿರುವ ತನ್ನ ತಾಯಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಹೋಗದೆ, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದರು.
ತೇಜಸ್ವಿನಿ ಯವರು ಫೆ.22ರಂದು ಕಂಪ್ಯೂಟರ್ ಕ್ಲಾಸ್ ಮುಗಿಸಿ ಮನೆಗೆ ಹೊರಟವರು ಸಂಜೆ ೪ ಗಂಟೆ ಸುಮಾರಿಗೆ ನೆರಿಯ ಗ್ರಾಮದ ಅಣಿಯೂರು ಎಂಬಲ್ಲಿ ಕೋಲೋಡಿ ಕಡೆಗೆ ನಡೆದುಕೊಂಡು ಹೋಗುತ್ತಿರುವ ವೇಳೆ ತನ್ನ ಅಕ್ಕ ಸುಮಂಗಳರವರಿಗೆ ಸಿಕ್ಕಿದ್ದು, ಆಕೆ ತಮ್ಮೊಟ್ಟಿಗೆ ಜೀಪಿನಲ್ಲಿ ತಂಗಿ ತೇಜಸ್ವಿನಿಯನ್ನು ಕರೆದುಕೊಂಡು ಹೋಗಿ ಮನೆಯ ಹತ್ತಿರ ಇಳಿಸಿ ಬಳಿಕ ಪತಿಯೊಂದಿಗೆ ತಮ್ಮ ಮನೆಗೆ ಹಿಂದಿರುಗಿದ್ದರು.
ಆದರೆ ರಾತ್ರಿ 7ಗಂಟೆಯವರೆಗೂ ತೇಜಸ್ವಿನಿಯವರು ಉಜಿರೆಯ ಮನೆಗೆ ಮರಳಿ ಬಾರದೆ ಇರುವ ಬಗ್ಗೆ ಮನೆಯೊಡತಿ ಯುವತಿಯ ಮನೆಯವರಿಗೆ ಫೋನ್ ಕರೆ ಮೂಲಕ ಮಾಹಿತಿ ನೀಡಿದಾಗ ಯುವತಿ ತೇಜಸ್ವಿನಿಯವರ ನಾಪತ್ತೆ ಪ್ರಕರಣ ಬೆಳಕಿಗೆ ಬಂದಿತ್ತು. ಆಕೆಯ ಮೊಬೈಲ್‌ಗೆ ಕರೆ ಮಾಡಿದಾಗ ಅದು ಸ್ವೀಚ್ ಆಫ್ ಆಗಿತ್ತು. ಮನೆಯವರು ತಮ್ಮ ಸಂಬಂಧಿಕರ ಮನೆಯಲ್ಲಿ ಹಾಗೂ ಊರಿನಲ್ಲಿ ಹುಡುಕಾಡಿ ಎಲ್ಲಿಯೂ ಪತ್ತೆಯಾಗದ ಹಿನ್ನಲೆಯಲ್ಲಿ ನಂತರ ಧರ್ಮಸ್ಥಳ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.
ಕೋಲೋಡಿ ಕಾಡಿನಲ್ಲಿ ಪತ್ತೆ: ಯುವತಿ ತೇಜಸ್ವಿನಿ ನಾಪತ್ತೆಯಾಗಿ ಒಂಭತ್ತು ದಿನಗಳು ಕಳೆಯುತ್ತಿದ್ದಂತೆ ಆಕೆಯ ಮೃತದೇಹ ಮನೆಯ ಸಮೀಪದ ಕೊಲೋಡಿ ಕಾಡಿಲ್ಲಿ ಪತ್ತೆಯಾಗಿದೆ. ಸ್ಥಳೀಯರು ಬಿದಿರು ಕಡಿಯು ಕಾಡಿಗೆ ಹೋದಾಗ ಕಾಡಿನಲ್ಲಿ ಕೊಳೆತ ಮೃತದೇಹ ಪತ್ತೆಯಾಗಿದ್ದು, ಯುವತಿ ತೇಜಸ್ವಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ಗೊತ್ತಾಗಿಲ್ಲ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ತೆರಳಿದ್ದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.