ಬೆಳ್ತಂಗಡಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆಯ ಹಿಂದೆ ತೈಲೋತ್ಪನ್ನ ಕಂಪನಿಯ ಮಾಲೀಕರಿಗೆ ಲಾಭ ಗಳಿಸುವ ಗುಪ್ತ ಅಜೆಂಡಾವಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ , ದ.ಕ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಆರೋಪಿಸಿದರು.
ಅವರು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ತೈಲ ಬೆಲೆ, ಗ್ಯಾಸ್ ದರ ಏರಿಕೆ, ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಿದ್ದರು
ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಶಿವಕುಮಾರ್ ಎಸ್. ಎಂ ಮಾತನಾಡುತ್ತಾ ನರೇಂದ್ರ ಮೋದಿ ಸರ್ಕಾರ ಒಂದು ತಿಂಗಳಲ್ಲಿ 100 ರೂಪಾಯಿ ಗ್ಯಾಸ್ ಬೆಲೆ ಏರಿಕೆ ಮಾಡುವ ಮೂಲಕ ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಮಾತನಾಡಿ ಕೇಂದ್ರದ ಕೃಷಿ ಕಾಯಿದೆಗಳ ವಿರುದ್ಧ ರೈತರು ನಡೆಸುವ ಹೋರಾಟದ ಬಗ್ಗೆ ಮೌನ ವಹಿಸುವ ಪ್ರಧಾನಿ ರೈತ ವಿರೋಧಿ ಕಾಯ್ದೆ ವಾಪಸ್ ಪಡೆಯದೆ ಹಠಮಾರಿ ಧೋರಣೆ ಮುಂದುವರೆಸುವ ಮೂಲಕ ತಾನೊಬ್ಬ ಸರ್ವಾಧಿಕಾರಿ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದರು.
ಸಿಪಿಐ(ಎಂ) ಮುಖಂಡ ಶೇಖರ್ ಲಾಯಿಲ ಮಾತನಾಡಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಗತ್ತಿನ ಅತ್ಯಂತ ಕೆಟ್ಟ ಸರ್ಕಾರವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಿಪಿಐ(ಎಂ) ಪಕ್ಷದ ನಾಯಕರಾದ ರೋಹಿಣಿ ಪೆರಾಡಿ , ರೈತ ಮುಖಂಡ ನೀಲೇಶ್ ಹೆಚ್ ಪೆರಿಂಜೆ , ಜಯನ್ ಮುಂಡಾಜೆ , ಜೋಸ್ ಕುದ್ಯಾಡಿ , ಮಹಿಳಾ ನಾಯಕರಾದ ಸುಕನ್ಯಾ ಹರಿದಾಸ್, ಸುಧಾ ಕೆ ರಾವ್ , ಕುಸುಮ ಮಾಚಾರ್ , ಶ್ರಮಶಕ್ತಿ ಸ್ವಸಹಾಯ ಗುಂಪಿನ ಸಂಯೋಜಕ ಸಂಜೀವ ಆರ್ ಅತ್ತಾಜೆ , ಎಸ್ಎಫ್ಐ ಮುಖಂಡ ಸುಹಾಸ್ ಬೆಳ್ತಂಗಡಿ ವಹಿಸಿದ್ದರು. ಸಿಪಿಐ(ಎಂ) ಮುಖಂಡ ವಸಂತ ನಡ ವಂದಿಸಿದರು. ಒಲೆ ಉರಿಸುವ ಮೂಲಕ ಕಾರ್ಯಕರ್ತರು ಪ್ರತಿಭಟನೆ ವ್ಯಕ್ತಪಡಿಸಿದರು.