ಗರ್ಡಾಡಿ: ಇಲ್ಲಿಯ ಗರ್ಡಾಡಿಯಲ್ಲಿ ವಿಚಿತ್ರ ಘಟನೆಯೊಂದು ನಡೆದ್ದು, ವ್ಯಕ್ತಿಯೋರ್ವ ನಾಪತ್ತೆಯಾಗಿ ಒಂದು ವಾರ ಕಳೆಯುತ್ತಿದ್ದಂತೆ, ಓಡಿಲ್ನಾಳಾದ ಕೆರೆಯಲ್ಲಿ ಪತ್ತೆಯಾದ ಶವವೊಂದನ್ನು ನಾಪತ್ತೆಯಾದ ವ್ಯಕ್ತಿಯದೆಂದು ಗುರುತು ಹಚ್ಚಿದ ಮನೆಯವರು ಅಂತ್ಯಸಂಸ್ಕಾರ ಮಾಡಿದ ಹತ್ತು ದಿನಗಳ ಬಳಿಕ ನಾಪತ್ತೆಯಾದ ವ್ಯಕ್ತಿ ಪತ್ತೆಯಾದ ಘಟನೆ ವರದಿಯಾಗಿದೆ.
ಗರ್ಡಾಡಿ ಗ್ರಾಮದ ಹಟ್ರಾಡಿ ನಿವಾಸಿ ಶ್ರೀನಿವಾಸ ದೇವಾಡಿಗ (60ವ) ನಾಪತ್ತೆಯಾಗಿ ಇದೀಗ ಮಂಗಳೂರಿನಲ್ಲಿ ಪತ್ತೆಯಾಗಿರುವ ವ್ಯಕ್ತಿಯಾಗಿದ್ದಾರೆ. ಓಡಿಲ್ನಾಳ ಗ್ರಾಮದ ಕುಲ್ಲುಂಜ ಎಂಬಲ್ಲಿ ತೋಟದ ಕೆರೆಯಲ್ಲಿ ಸಾವನ್ನಪ್ಪಿದ ವ್ಯಕ್ತಿ ಯಾರೆಂಬುದು ಈಗ ಎಲ್ಲರನ್ನೂ ಕಾಡುವತ್ತಿರುವ ಪ್ರಶ್ನೆಯಾಗಿದ್ದು, ಇದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನೆ ವಿವರ: ಗರ್ಡಾಡಿ ಹಟ್ರಾಡಿ ಕೆರೆಕೋಡಿ ನಿವಾಸಿ ಬಾಬು ದೇವಾಡಿಗ ಎಂಬವರ ಪುತ್ರರಾಗಿರುವ ಶ್ರೀನಿವಾಸ ಅವರು ಜ. 26 ರಂದು ಮನೆಯಿಂದ ಹೊರಹೋದವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಕುಡಿತದ ಚಟವನ್ನು ಹೊಂದಿದ್ದ ಇವರು ಮನೆಯಿಂದ ಒಮ್ಮೆ ಹೊರಗೆ ಹೋದರೆ ಊರೆಲ್ಲ ತಿರುಗಾಡಿ ಒಂದು ವಾರ, ೧೫ ದಿನಗಳ ಬಳಿಕ ಮನೆಗೆ ಬರುತ್ತಿದ್ದರು. ಇದರಿಂದಾಗಿ ಅವರ ಪತ್ನಿ ಮತ್ತು ಮಕ್ಕಳು ತಮ್ಮ ತಾಯಿ ಮನೆ ಮಂಗಳೂರಿನಲ್ಲಿ ಇದ್ದು, ಇವರೊಬ್ಬರೇ ತನ್ನ ಸಹೋದರ ಶ್ರೀಧರ ಎಂಬವರ ಮನೆಯಲ್ಲಿ ವಾಸವಾಗಿದ್ದರು.
ಇವರು ನಾಪತ್ತೆಯಾಗಿ ಒಂದು ವಾರ ಕಳೆಯುತ್ತಿದ್ದಂತೆಯೇ ಫೆ.3ರಂದು ಓಡಿಲ್ನಾಳ ಗ್ರಾಮದ ಕುಲ್ಲುಂಜ ನಾರಾಯಣ ಭಟ್ ಎಂಬವರ ತೋಟದ ಕೆರೆಯಲ್ಲಿ ಶವವೊಂದು ತೇಲುತ್ತಿರುವುದು ಪತ್ತೆಯಾಗಿತ್ತು. ಶವ ಪತ್ತೆಯಾದ ಬಗ್ಗೆ ಚಂದ್ರಹಾಸ ಎಂಬವರು ಶ್ರೀಧರ್‌ರಿಗೆ ಮಾಹಿತಿ ನೀಡಿದ್ದರು.
ಇದು ನಾಪತ್ತೆಯಾದ ಶ್ರೀನಿವಾಸರದ್ದಿರಬೇಕು ಎಂಬ ವದಂತಿಯೂ ಹರಡಿತ್ತು. ಶವ ಕೊಳೆತು ಮೀನುಗಳು ತಿಂದಿರುವುದರಿಂದ ಶವದ ಮುಖದಲ್ಲಿ ಗಾಯಗಳಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ಬಂದ ಮಾಹಿತಿಯನ್ವಯ ಪೊಲೀಸರು ಹಾಗೂ ಶ್ರೀನಿವಾಸರ ಅವರ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿ ಮೃತದೇಹ ವನ್ನು ಗುರುತು ಹಚ್ಚಿ ಹೇಳಿಕೆ ನೀಡಿದ್ದರು. ನಂತರ ಮನೆಯವರು ಶವದ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು.
ನಾಪತ್ತೆಯಾದ ಶ್ರೀನಿವಾಸ ಮಂಗಳೂರಿನಲ್ಲಿ ಪತ್ತೆ:
ಇದಾಗಿ ಸುಮಾರು ಹತ್ತು ದಿನಗಳ ಕಳೆದಿದ್ದು, ಮನೆಯವರು ಉತ್ತರ ಕ್ರಿಯೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದರು. ಈ ಮಧ್ಯೆ ನಾಪತ್ತೆಯಾದ ಶ್ರೀನಿವಾಸ ಅವರು ಮಂಗಳೂರಿನಲ್ಲಿ ಇದ್ದಾರೆ ಎಂಬ ಮಾಹಿತಿಯೂ ಬಂತು. ಅವರ ಪತ್ನಿಯ ಮನೆ ಮಂಗಳೂರಿನಲ್ಲಿರುವುದರಿಂದ ಅವರು ಹುಡುಕಾಟ ನಡೆಸಿದಾಗ ಅವರು ಮಂಗಳೂರಿನ ಬೀದಿಯಲ್ಲಿ ಪತ್ತೆಯಾದರು.ಅವರನ್ನು ಕೂಡಲೇ ವಾಹನದಲ್ಲಿ ಬೆಳ್ತಂಗಡಿ ಠಾಣೆಗೆ ಹಾಜರು ಪಡಿಸಿ ನಂತರ ಪತ್ನಿಯ ಮನೆಯಾದ ಮಂಗಳೂರಿಗೆ ಕರೆದೊಯ್ಯಲಾಗಿದೆ. ಇದೀಗ ಕರೆಗೆ ಬಿದ್ದು ಸಾವನ್ನಪ್ಪಿದ ವ್ಯಕ್ತಿ ಯಾರು ಎಂಬುದು ಪ್ರಶ್ನೆಯಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.