ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲಿ ಧ್ವಜ ಹಾರಿಸುವ ಅಭಿಯಾನ ನಡೆಸಲಾಗುತ್ತಿದೆ. ಇಂದಿನಿಂದ (ಆ.13) 15ರವರೆಗೆ ಒಟ್ಟು ಮೂರು ದಿನ ಮನೆಗಳಲ್ಲಿ ಧ್ವಜ ಹಾರಿಸಲು ಅನುಮತಿ ನೀಡಲಾಗಿದೆ. ಧ್ವಜ ನಿಯಮಕ್ಕೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರವು ಹಗಲು ರಾತ್ರಿ ತ್ರಿವರ್ಣ ಧ್ವಜ ಹಾರಿಸಲು ಅನುಮತಿಸಿದೆ.
ಧ್ವಜ ಹಾರಿಸುವಾಗ ಕೆಲವು ಅಂಶಗಳು ಗಮನದಲ್ಲಿಡಿ.
*ನಿಯಮದಂತೆ ಭಾರತದ ಧ್ವಜವು ಆಯತಾಕಾರದಲ್ಲಿರಬೇಕು. ಧ್ವಜವು ಯಾವುದೇ ಗಾತ್ರದಲ್ಲಿರದ್ದರೂ ಅದರ ಉದ್ದ ಮತ್ತು ಅಗಲದ ಅನುಪಾತವು 3:2 ಆಗಿರಬೇಕು.
*ಕಾಗದದಿಂದ ಮಾಡಿದ ತ್ರಿವರ್ಣವನ್ನು ಎಸೆಯವಂತಿಲ್ಲ ಅಥವಾ ಹರಿದು ಹಾಕಲಾಗುವುದಿಲ್ಲ. ಕಾಗದದಿಂದ ಮಾಡಿದ ತ್ರಿವರ್ಣವನ್ನು ಗೌರವದಿಂದ ವಿಲೇವಾರಿ ಮಾಡುವುದು ಅವಶ್ಯಕ.
*ತ್ರಿವರ್ಣ ಧ್ವಜವನ್ನು ಹಾರಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಆದರೆ ಅದನ್ನು ಕಾರಿನಲ್ಲಿ ಹಾಕಿಕೊಂಡು ತಿರುಗಾಡಬಹುದು ಎಂದಲ್ಲ. ಧ್ವಜ ಸಂಹಿತೆಯ ಪ್ರಕಾರ, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ಜನರಿಗೆ ಮಾತ್ರ ತ್ರಿವರ್ಣ ಧ್ವಜವನ್ನು ಧರಿಸಲು ಅವಕಾಶವಿದೆ.
*ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸಿದಾಗ ಕಂಬ ಯಾವುದೇ ಬದಿಗೆ ವಾಲಿರಬಾರದು.
*ಧ್ವಜ ನೆಲಕ್ಕೆ ತಾಗಬಾರದು.
*ಭಾರತದ ತ್ರಿವರ್ಣದ ಧ್ವಜಾರೋಹಣ ಮಾಡುವಾಗ ಯಾವಾಗಲೂ ಕೇಸರಿ ಬಣ್ಣ ಮೇಲೆ ಬರುವಂತೆ, ಹಸಿರು ಬಣ್ಣ ಕೆಳಗೆ ಬರುವಂತೆ ನೋಡಿಕೊಳ್ಳಿ.
*ಧ್ವಜದ ಮೇಲೆ ಏನನ್ನೂ ಬರೆಯುವಂತಿಲ್ಲ. ಯಾವುದೇ ಉಡುಗೆ ಅಥವಾ ಸಮವಸ್ತ್ರದ ಯಾವುದೇ ಭಾಗದಲ್ಲಿ ತ್ರಿವರ್ಣ ಧ್ವಜವನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
*ಯಾವುದೇ ಕರವಸ್ತ್ರ, ದಿಂಬು ಅಥವಾ ಕರವಸ್ತ್ರವು ತ್ರಿವರ್ಣ ಧ್ವಜದ ವಿನ್ಯಾಸವನ್ನು ಹೊಂದಿರಬಾರದು.
*ಧ್ವಜವನ್ನು ಮಡಚಲೂ ನಿಯಮವಿದೆ. ಧ್ವಜವನ್ನು ಸ್ವಚ್ಛ ಸಮತಟ್ಟಾದ ಸ್ಥಳದಲ್ಲಿ ಇಟ್ಟುಕೊಳ್ಳಿ. ಮೊದಲಿಗೆ ಕೇಸರಿ ಮತ್ತು ಹಸುರು ಬಣ್ಣದ ಬಟ್ಟೆಯನ್ನು ಬಿಳಿ ಬಣ್ಣದ ಬಟ್ಟೆಯ ಕೆಳಗೆ ಮಡಚಿ. ಆಯತಾಕಾರಾದಲ್ಲಿರುವ ಬಿಳಿ ಬಣ್ಣದ ಬಟ್ಟೆಯಲ್ಲಿ ಕೇವಲ ಅಶೋಕ ಚಕ್ರ ಕಾಣುವಂತೆ ಇನ್ನೆರೆಡು ತುದಿಗಳನ್ನು ಮಡಚಿ.
*ರಾಷ್ಟ್ರಧ್ವಜ ಹರಿದರೆ ಏನು ಮಾಡಬೇಕು ಎಂಬ ಪ್ರಶ್ನೆ ಹಲವರಿಗಿದೆ. ಒಂದು ವೇಳೆ ಧ್ವಜವು ಹರಿದರೆ ಅಥವಾ ಬಳಸಲಾರದ ಸ್ಥಿತಿಗೆ ಬಂದರೆ, ಅದನ್ನು ಖಾಸಗಿಯಾಗಿ ಗೌರವಯುತವಾಗಿ ಸುಟ್ಟು ಹಾಕಬೇಕು. ಹಾಗೆಯೇ ವಿಶೇಷ ದಿನಗಳಂದು (ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನ) ಪೇಪರ್ ಧ್ವಜಗಳನ್ನು ಬಳಸಬಹುದು. ಅವುಗಳನ್ನೂ ಕೂಡ ಅಷ್ಟೇ ಗೌರವಯುತವಾಗಿ ಖಾಸಗಿಯಾಗಿ ಸುಟ್ಟು ಹಾಕಬೇಕು.