ಅಳದಂಗಡಿ: ಬಡಗಕಾರಂದೂರು ಗ್ರಾಮದ ಅಳದಂಗಡಿ ಬಸ್ ನಿಲ್ದಾಣದ ಸಮೀಪ ಸರ್ಕಾರಿ ಜಮೀನಿನಲ್ಲಿದ್ದ, ವಾಸ್ತವ್ಯೇತರ ಅಂಗಡಿ ಕಟ್ಟಡವನ್ನು ವಾಸ್ತವ್ಯದ ಮನೆಯೆಂದು ದಾಖಲೆ ನೀಡಿ, ವ್ಯಕ್ತಿಯೋರ್ವರು ಪಡೆದಿದ್ದು, ಇದನ್ನು ಪರಿಶೀಲನೆ ನಡೆಸಿದ ತಹಶೀಲ್ದಾರ್ ಹಕ್ಕುಪತ್ರವನ್ನು ರದ್ದುಪಡಿಸಿದ್ದಾರೆ.
ಬಡಗಕಾರಂದೂರು ಗ್ರಾಮದ ಅಳದಂಗಡಿ ಬಸ್ ನಿಲ್ದಾಣದ ಸಮೀಪ ಸರ್ಕಾರಿ ಜಮೀನಿನನ್ನು
2016-17 ರಲ್ಲಿ ವ್ಯಕ್ತಿಯೊರ್ವರು ವಾಸ್ತವ್ಯೇತರ ಅಂಗಡಿ ಕಟ್ಟಡ (ಗ್ಯಾರೇಜ್)ವನ್ನು ವಾಸ್ತವ್ಯದ ಮನೆಯೆಂದು ದಾಖಲೆ ನೀಡಿ, ಹೆಚ್‌ಎಸ್‌ಆರ್‌ಎಸ್‌ಆರ್ 140/2016-17 ರಂತೆ 94ಸಿ ಅಡಿಯಲ್ಲಿ ಹಕ್ಕುಪತ್ರವನ್ನು ಮಂಜೂರು ಮಾಡಿಸಿಕೊಂಡಿದ್ದರು.
ಈ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ, ಪುತ್ತೂರು ಉಪವಿಭಾಗಾಧಿಕಾರಿ, ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಜಿಲ್ಲಾಧಿಕಾರಿ ನ್ಯಾಯಾಲಯವು ಬೆಳ್ತಂಗಡಿ ತಹಶೀಲ್ದಾರ್‌ರವರಿಗೆ ಸ್ಥಳ ತನಿಖೆ ನಡೆಸಿ ನಿಯಮಾನುಸಾರ ಪ್ರಕರಣವನ್ನು ಇತ್ಯರ್ಥಪಡಿಸಲು ಆದೇಶಿಸಿತ್ತು. ಇತ್ತೀಚಿಗೆ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ, ವೇಣೂರು ಕಂದಾಯ ನಿರೀಕ್ಷಕರು, ಬಡಗಕಾರಂದೂರು ಗ್ರಾಮಕರಣಿಕರು ಸ್ಥಳ ಮಹಜರು ನಡೆಸಿದರು. ಈ ಸಂದರ್ಭದಲ್ಲಿ ಜೋಶಿಲ್ ವೈ ಎಂಬವರಿಗೆ ಮಂಜೂರುಗೊಂಡ ಬಡಗಕಾರಂದೂರು ಗ್ರಾಮದ ಸ.ನಂ 84/1ಪಿ1 ರಲ್ಲಿ 0.09 ಎಕರೆ ಜಮೀನಿನಲ್ಲಿ ವಾಸ್ತವ್ಯದ ಮನೆಯ ಬದಲಾಗಿ ವಾಸ್ತವ್ಯೇತರ ಅಂಗಡಿ ಕಟ್ಟಡ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಶರ್ತ ಉಲ್ಲಂಘನೆಯಾಗಿರುವ ಕಾರಣ ಹಕ್ಕುಪತ್ರ ಹಾಗೂ ಜಮೀನಿನ ನಕ್ಷೆಯನ್ನು ರದ್ದು ಪಡಿಸಿ, ಪಹಣಿಪತ್ರ ರದ್ದು ಪಡಿಸಿ ಸರ್ಕಾರ ಎಂದು ದಾಖಲಿಸಲು ಆದೇಶ ನೀಡುವಂತೆಯೂ ಪುತ್ತೂರು ಉಪವಿಭಾಗಧಿಕಾರಿ ಹಾಗೂ ಜಿಲ್ಲಾಧಿಕಾರಿರವರಿಗೆ ವರದಿ ಸಲ್ಲಿಸಿದ್ದಾರೆ.