ಬೆಳ್ತಂಗಡಿ: ಲೋಕಾಯುಕ್ತ ನ್ಯಾಯಮೂರ್ತಿ ರಾಜ್ಯದ ವಿವಿಧ ಕಡೆಗಳಲ್ಲಿ ಅಭಿವೃದ್ಧಿಯಾಗದೆ ಉಳಿದ ಸರ್ಕಾರಿ ಕೆರೆಗಳ ಬಗ್ಗೆ ತಹಸೀಲ್ದಾರ್‌ಗಳಿಂದ ವರದಿ ತರಿಸಿಕೊಂಡಿದ್ದು, ಅಭಿವೃದ್ಧಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಂದ ವಿವಿಧ ರೀತಿಯಲ್ಲಿ ವಿಶೇಷ ಅನುದಾನ ತರಿಸಿಕೊಂಡು ಯೋಜನೆ ರೂಪಿಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗುರುವಾಯನಕೆರೆಯಲ್ಲಿ 14.71 ಎಕರೆ ಕೆರೆ ಇದ್ದು, 2021ರಲ್ಲಿ ಬೆಳ್ತಂಗಡಿ ತಹಸೀಲ್ದಾರ್ ಕಚೇರಿಯಿಂದ ಈ ಜಾಗದ ಯಾವುದೇ ತಕರಾರು ಇಲ್ಲ ಎಂದು ಕುವೆಟ್ಟು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದ್ದರು. ಈ ಬಗ್ಗೆ ದಕ್ಷಿಣ ಕನ್ನಡ ಲೋಕಾಯುಕ್ತ ಪೊಲೀಸರಿಗೆ ವರದಿ ಬಂದಿದ್ದು, ಲೋಕಾಯುಕ್ತ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ಭೇಟಿ ನೀಡಿ ಬೆಳ್ತಂಗಡಿ ತಹಸೀಲ್ದಾರ್ ಜತೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಅಭಿವೃದ್ಧಿ ಪಡಿಸುವ ಬಗ್ಗೆ ಚರ್ಚೆ ನಡೆಸಿ ವರದಿ ಪಡೆದುಕೊಂಡರು. ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ಇನ್‌ಸ್ಪೆಕ್ಟರ್ ಅಮಾನುಲ್ಲಾ, ಸಿಬ್ಬಂದಿ ಗಂಗಣ್ಣ, ವಿನಾಯಕ, ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ, ಡಿ.ಟಿ.ರವಿ ಕುಮಾರ್, ಕಂದಾಯ ಇನ್‌ಸ್ಪೆಕ್ಟರ್ ಪ್ರತೀಕ್, ಕುವೆಟ್ಟು ಪಿಡಿಒ ಇಮ್ತಿಯಾಜ್, ಓಡಿಲ್ನಾಳ ಗ್ರಾಮ ಆಡಳಿತಾಧಿಕಾರಿ ಪೃಥ್ವಿರಾಜ್ ಶೆಟ್ಟಿ ಮತ್ತು ಕುವೆಟ್ಟು ಗ್ರಾಮ ಆಡಳಿತಾಧಿಕಾರಿ ಉಪಸ್ಥಿತರಿದರು.