ಮಂಗಳೂರು :ಸುರತ್ಕಲ್ ನ ಫಾಜಿಲ್ ಹತ್ಯೆ ಪ್ರಕರಣ ಸಂಬಂಧ ಕೊಲೆಗೆ ಬಳಸಿದ್ದ ಕಾರು ಮತ್ತು ಚಾಲಕನನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.
ಫಾಜಿಲ್ ಮೇಲೆ ದಾಳಿ ವೇಳೆ ಬಳಸಿದ್ದ ಕಾರು ಮತ್ತು ಚಾಲಕ ಅಜಿತ್ ನನ್ನುಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರು ಚಾಲಕ ಅಜಿತ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ನಾಲ್ಕು ಮಂದಿ ಹಾಗೂ ಇತ ಇಬ್ಬರು ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದು ಶೀಘ್ರ ಬಂಧನ ಪ್ರಕ್ರಿಯೆಗೆಒಳಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಶಯದ ಮೇರೆಗೆ ಮೊದಲು 21 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ. ಶುಕ್ರವಾರ ರಾತ್ರಿ ಮತ್ತೆ 16 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ರೀತಿ ವಶಕ್ಕೆ ಪಡೆದವರಿಂದ ದೊರೆತ ಮಾಹಿತಿಯ ಆಧಾರದಲ್ಲಿ ಆರೋಪಿಗಳ ಖಚಿತ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ಹಿನ್ನೆಲೆ : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ಬಳಿಕ ಕೆಂಡದಂತಿರುವ ಪರಿಸ್ಥಿತಿಯಲ್ಲಿ ಕರಾವಳಿಯಲ್ಲಿ ಮತ್ತೊಂದು ರಕ್ತದೋಕುಳಿ ಚೆಲ್ಲಿತ್ತು. ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಕಳವಳದ ವಾತಾವರಣ. ಸುರತ್ಕಲ್ ನಲ್ಲಿ ಗುರುವಾರ ರಾತ್ರಿ ಯುವಕನೊಬ್ಬನ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಲಾಗಿತ್ತು.
ಸುರತ್ಕಲ್ ಮಂಗಳ ಪೇಟೆಯ ಫಾಜಿಲ್ ಎಂಬ ಯುವಕನ ಮೇಲೆ ತಲವಾರು ದಾಳಿ ನಡೆಸಲಾಗಿದ್ದು, ಚಪ್ಪಲಿ ಖರೀದಿಗೆ ಬಂದಿದ್ದ ಆತನ ಮೇಲೆ ಅಂಗಡಿಯ ಎದುರಿನ ಜಗಲಿಯಲ್ಲೇ ತಲವಾರಿನಿಂದ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಆ ಸಂದರ್ಭದಲ್ಲಿ ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.