ಬೆಳ್ತಂಗಡಿ : ಕೊರಗಜ್ಜ ದೈವಸ್ಥಾನದ ಕಾಣಿಕೆ ಡಬ್ಬಿಗೆ ಕಾಂಡೋಮ್ ಹಾಕಿ ಅವಹೇಳನ ಮಾಡಿದ ವ್ಯಕ್ತಿ ದೈವದೆದುರು ಬಂದು ಕ್ಷಮೆಯಾಚಿಸಿದ ಘಟನೆ ನಡೆದಿದ್ದು ಆತನನ್ನು
ಪಾಂಡೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಮಂಗಳೂರಿನ ವಿವಿಧ ಕೊರಗಜ್ಜನ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್, ಅವಾಚ್ಯ ಪದಗಳ ಪತ್ರವನ್ನು ಹಾಕಿ ಅಪಮಾನ ಮಾಡಲಾಗಿತ್ತು.
ಈ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗಳು ನಡೆಸಿದ್ದವು. ಈ ಘಟನೆಯ ಸಂದರ್ಭದಲ್ಲಿ ಕೊರಗಜ್ಜ ದೈವದ ಮುಂದೆ ಭಕ್ತರು ಅವಹೇಳನ ಮಾಡಿದವರಿಗೆ ಶಿಕ್ಷಿಸುವಂತೆ ಪ್ರಾರ್ಥಿಸಿದ್ದರು. ಮಾ.31ರ ರಾತ್ರಿ ಎಮ್ಮೆಕೆರೆಯಲ್ಲಿ ಕೋಟೆ ಬಬ್ಬುಸ್ವಾಮಿ ದೈವಸ್ಥಾನದ ಜಾತ್ರೆ ನಡೆದಿದ್ದು, ಅಲ್ಲಿಂದ ಬಂದ ವ್ಯಕ್ತಿಯೋರ್ವ ಘಟನೆಯ ಹಿನ್ನೆಲೆಯಲ್ಲಿ ಕ್ಷಮಾಪಣೆ ಮಾಡಿದ್ದಾನೆ. ಅಂದು ತನ್ನನ್ನು ಗೆಳೆಯನೊಬ್ಬ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದ. ನಾನು ಹೊರಗೆಡೆಯೇ ಇದ್ದೆಆದರೆ, ಆತ ಇತ್ತೀಚೆಗೆ ಹುಚ್ಚು ಹಿಡಿದಂತೆ ವರ್ತಿಸಿ ಗೋಡೆಗೆ ತಲೆ ಚಚ್ಚಿಕೊಂಡು ಮೃತಪಟ್ಟ ಸುದ್ದಿ ತಿಳಿದಿದೆ. ಇದೀಗ ನನ್ನ ಆರೋಗ್ಯವೂ ಸಹ ಕೆಡುತ್ತಿದ್ದು, ಕ್ಷಮೆ ನೀಡುವಂತೆ ಪ್ರಾರ್ಥಿಸಿದ್ದಾನೆ ಎಂದು ನೆರೆದ ಜನರ ಮುಂದೆ ಅಂದು ನಡೆದ ಘಟನಾವಳಿ ಬಿಚ್ಚಿಟ್ಟಿದ್ದಾನೆ. ವಿಕೃತಿ ಮೆರೆದ ವ್ಯಕ್ತಿಯ ಹೇಳಿಕೆಗೆ ನೆರೆದಿದ್ದ ಜನರು ಆತನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಘಟನೆ ಬಗ್ಗೆ ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.