ಅಕ್ರಮ ಗೋ ಸಾಗಾಟ: ಮೂವರ ಬಂಧನ
ಉಜಿರೆ: ಪಿಕಪ್ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಗೋಸಾಗಾಟ ಮಾಡುತ್ತಿರುವವರನ್ನು ತಡೆದು ನಿಲ್ಲಿಸಿದ ಪೊಲೀಸರು, ಗೋಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ, ಜಾನುವಾರು ಸಹಿತ ಕೃತ್ಯಕ್ಕೆ ಬಳಸಿದ್ದ ಪಿಕಪ್ ವಾಹನವನ್ನು ವಶಕ್ಕೆ ಪಡೆದ ಘಟನೆ ಮಾ. 7ರಂದು ಸಂಜೆ ಉಜಿರೆ ಗ್ರಾಮದ ಇಚ್ಚಿಲ ಎಂಬಲ್ಲಿ ನಡೆದಿದೆ.
ಧರ್ಮಸ್ಥಳ ಗ್ರಾಮದ ಅಜಕುರಿ ನಿವಾಸಿ ಮುಜೀಬ್ ರಹಿಮಾನ್ (27ವ), ಇದೇ ಗ್ರಾಮದ ಅಜಕುರಿ ನಿವಾಸಿ ಸುಲೈಮಾನ್ (65ವ) ಹಾಗೂ ಮೈಸೂರು ಜಿಲ್ಲೆಯ ತೊಣಚಿಕೊಪ್ಪಲು ನಿವಾಸಿ ಪ್ರಸ್ತುತ ಧರ್ಮಸ್ಥಳ ಗ್ರಾಮದ ಅಜಕುರಿಯಲ್ಲಿ ವಾಸವಾಗಿರುವ ರಾಜು (40ವ) ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆಯ ವಿವರ: ಮಾ.7 ರಂದು ರಂದು ಸಂಜೆ ನಡ ಗ್ರಾಮದ ಸುರ್ಯ ದೇವಸ್ಥಾನದ ರಸ್ತೆಯ ಮೂಲಕ ಪಿಕಪ್( ಕೆಎ21 – 8800 ) ವಾಹನದಲ್ಲಿ ದನ ಮತ್ತು ಕರುವನ್ನು ವಧೆ ಮಾಡಿ ಮಾಂಸ ಮಾರಾಟ ಮಾಡುವ ಉzಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯನ್ವಯ ಬೆಳ್ತಂಗಡಿ ಠಾಣೆಯ ಎಎಸ್ಐ ರಾಮಯ್ಯ ಹೆಗ್ಡೆ ಹಾಗೂ ಸಿಬ್ಬಂದಿಗಳು ಉಜಿರೆ ಗ್ರಾಮದ ಇಚ್ಚಿಲ ಎಂಬಲ್ಲಿ ಸರ್ಕಲ್ ಬಳಿಗೆ ತಲುಪುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಪಿಕಪ್ ವಾಹನವವನ್ನು ತಡೆದು ನಿಲ್ಲಿಸಿ, ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿರುವುದು ಪತ್ತೆಯಾಯಿತು.
ಕೂಡಲೇ ಪೊಲೀಸರು ಪಿಕಪ್ನಲ್ಲಿದ್ದ ಮೂವರನ್ನು ಬಂಧಿಸಿ, ವಾಹನದಲ್ಲಿದ್ದ ರೂ. 11 ಸಾವಿರ ಮೌಲ್ಯದ ಹಸು, ರೂ. 500 ಮೌಲ್ಯದ ಕರು ಸೇರಿದಂತೆ, ಕೃತ್ಯಕ್ಕೆ ಬಳಸಿದ್ದ ರೂ.2ಲಕ್ಷ ಮೌಲ್ಯದ ಪಿಕಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.