ಪುತ್ತೂರು: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ಖರೀದಿಸುವವರಂತೆ ನಟಿಸಿ ಎರಡೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಅಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದ ಕಳ್ಳಿಯರ ಗ್ಯಾಂಗಿನ ಮೂವರನ್ನು ಪುತ್ತೂರು ನಗರ ಪೊಲೀಸರು ಸೆ. 13ರಂದು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಬೀಬಿಜಾನ್, ಹುಸೇನ್ ಬಿ, ಜೈತುಂಬಿ ಬಂಧಿತ ಆರೋಪಿಗಳು.
ಬಂಧಿತರಿಂದ ಕಳವು ಮಾಡಿದ ಚಿನ್ನಾಭರಣ 50. 242 ಗ್ರಾಂ ತೂಕದ ರೂ. 2,60,400 ಮೌಲ್ಯದ ಕಿವಿಯ ಬೆಂಡೋಲೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪುತ್ತೂರಿನ ಪುತ್ತೂರು ಹಿಂದೂಸ್ತಾನ್ ಕಮರ್ಶಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಜೋಸ್ ಆಲುಕ್ಕಾಸ್ ನಲ್ಲಿ ಸೆ.1 ರಂದು ಕಳವು ಕೃತ್ಯ ಜರುಗಿತ್ತು.
ಸೆ.1 ರಂದು ಜೋಸ್ ಅಲುಕಾಸ್‌ಗೆ ಆರೋಪಿಗಳು ಆಗಮಿಸಿ ಕಿವಿಯ ಬೆಂಡೋಲೆ ತೋರಿಸುವಂತೆ ಮಳಿಗೆಯಲ್ಲಿ ಹೇಳಿದ್ದಾರೆ. ಬಳಿಕ ಸುಮಾರು 3 ಗ್ರಾಂ ತೂಕದ ರೂ. 13 ,4೦೦ ರೂಪಾಯಿ ಮೌಲ್ಯದ ಬೆಂಡ್ ಒಂದನ್ನು ಖರೀದಿಸಿದ್ದಾರೆ. ಇದರ ಬಿಲ್ ಸಂದರ್ಭ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿದ್ದರು.
ಆರೋಪಿಗಳು ಖರೀದಿ ನಡೆಸಿ ಮಳಿಗೆಯಿಂದ ತೆರಳಿದ ಬಳಿಕ ತಮ್ಮ ಸ್ಟಾಕ್ ನಿಂದ ಅಂದಾಜು 50 ಗ್ರಾಂ ನ ಕಿವಿಯ ಬೆಂಡೋಲೆ ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಈ ಹಿನ್ನಲೆ ಮಳಿಗೆ ಸಿಬಂದಿಗಳು ಸಿಸಿಟಿವಿ ಪರಿಶೀಲಿಸಿದಾಗ 3ಗ್ರಾಂ ತೂಕದ ಬೆಂಡ್ ಖರೀದಿಸಿದ ಮೂವರು ಮಹಿಳೆಯರೇ ಈ ಬೆಂಡೋಲೆ ಎಗರಿಸಿರುವುದು ಪತ್ತೆಯಾಗಿದೆ. ಅವರು ಖರೀದಿ ಸಮಯದಲ್ಲಿ ನೀಡಿದ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ನಕಲಿ ಎಂದು ಪರಿಶೀಲನೆ ವೇಳೆ ತಿಳಿದು ಬಂದಿತ್ತು
ಈ ಹಿನ್ನಲೆಯಲ್ಲಿ ಜೋಸ್ ಅಲುಕ್ಕಾಸ್ ಜ್ಯುವೆಲ್ಲರಿ ಮ್ಯಾನೇಜರ್ ರತೀಶ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬೀರಮಲೆ ಎಂಬಲ್ಲಿ ಬಂಧಿಸಿದ್ದರು.ಬಂಧಿತ ಆರೋಪಿಗಳಿಂದ ಕಳವು ಮಾಡಿದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.