ಆರೋಪಿ ಸಿದ್ದಿಕ್
ಬೆಳ್ತಂಗಡಿ: ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ತೆಂಕಕಜೆಕಾರು ಗ್ರಾಮದ ಕರ್ಲ ನಿವಾಸಿ ರಫೀಕ್(20ವ.) ಎಂಬವರನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಲೆಗೈದ ಆರೋಪಿ ಸಿದ್ದೀಕ್ ಎಂಬಾತನನ್ನು ಪುಂಜಾಲಕಟ್ಟೆ ಪೊಲೀಸರು ಸೆ.13ರಂದು ಬಂಧಿಸಿದ್ದಾರೆ.
ತೆಂಕಕಜೆಕಾರು ಗ್ರಾಮದ ಕೆಳಗಿನ ಕರ್ಲ ನಿವಾಸಿ ಸಿದ್ದೀಕ್(30ವ.) ಬಂಧಿತ ಆರೋಪಿಯಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಘಟನೆ ನಡೆದ ಸ್ಥಳಕ್ಕೆ ಕರೆತಂದು ಮಹಜರು ನಡೆಸಿದ್ದು,ಆರೋಪಿಯು ಕೃತ್ಯಕ್ಕೆ ಬಳಸಿದ ಮಾರುತಿ ಆಲ್ಟೋ ಕಾರು, ಚಾಕು, ಕೃತ್ಯದ ವೇಳೆ ಆತ ತೊಟ್ಟಿದ್ದ ವಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೃತ ಪಟ್ಟ ರಫೀಕ್
ಘಟನೆ ವಿವರ: ಆರೋಪಿ ಸಿದ್ದೀಕ್‌ನೊಂದಿಗೆ ಮೃತ ರಫೀಕ್ ಹಲವು ಬಾರಿ ಕ್ಷುಲ್ಲಕ ಕಾರಣಗಳಿಗಾಗಿ ಗಲಾಟೆ ಮಾಡಿದ್ದ ಎನ್ನಲಾಗುತ್ತಿದ್ದು, ಇದರಿಂದ ಬೇಸತ್ತಿದ್ದ ಆರೋಪಿ ಸಿದ್ದೀಕ್ ರಫೀಕ್‌ಗೆ ಬುದ್ದಿ ಕಲಿಸಬೇಕೆಂದು ಹಲವು ಸಮಯದಿಂದ ಕಾಯುತ್ತಿದ್ದನೆನ್ನಲಾಗಿದೆ. ಸೆ.12ರಂದು ಸಂಜೆ 6 ಗಂಟೆಯ ವೇಳೆಗೆ ಸಿದ್ದೀಕ್‌ನ ಮನೆಯ ಮುಂಭಾಗ ಶಟಲ್ ಬಾಡ್ಮಿಂಟನ್ ಆಟ ಆಡುತ್ತಿದ್ದ ಸಮಯ ರಫೀಕ್‌ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲಿನ ಸಮೀಪದ ಗುಡ್ಡ ಪ್ರದೇಶಕ್ಕೆ ಸಿಗರೇಟು ಸೇದುವ ನೆಪದಲ್ಲಿ ಕರೆದುಕೊಂಡು ಹೋಗಿದ್ದಾನೆ. ಆತನಲ್ಲಿ ಮಾತಾನಾಡುತ್ತಾ ಸಿದ್ದೀಕ್ ತಾನು ತಂದಿದ್ದ ಚಾಕುವಿನಿಂದ ರಫೀಕ್ ಅವರ ಕುತ್ತಿಗೆಗೆ, ಎದೆಗೆ ಮತ್ತು ಹೊಟ್ಟೆಗೆ ತಿವಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ತೀವ್ರ ರಕ್ತಸ್ರಾವವಾಗಿ ಬಿದ್ದವನನ್ನು ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿ ಮುಖವನ್ನು ಜಜ್ಜಿ ಕೊಲೆಮಾಡಲಾಗಿದೆ. ರಫೀಕ್ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ಸಿದ್ದೀಕ್ ಮೃತದೇಹವನ್ನು ಅಲ್ಲಿಯೇ ಬಿಟ್ಟರೆ ತೊಂದರೆಯಾಗಬಹುದೆಂದು ಅಲ್ಲಿಂದ ತನ್ನ ಗೆಳೆಯ ಪಯಾಝ್ ಎಂಬವರಿಗೆ ಕರೆ ಮಾಡಿ ಆತನ ಮನೆಗೆ ಹೋಗಿ ಕಾರು ಪಡೆದುಕೊಂಡು, ವಾಹನದಲ್ಲಿ ಮೃತದೇಹವನ್ನು ಇಟ್ಟುಕೊಂಡು ವಗ್ಗ ಕಡೆ ಬಂದು ನಿರ್ಜನ ಪ್ರದೇಶವಾದ
ಕೊಡ್ಯಮಲೆ ಕಾಡುಪ್ರದೇಶದ ಮೋರಿಯಲ್ಲಿ ಹರಿಯುತ್ತಿರುವ ನೀರಿಗೆ ಎತ್ತಿಹಾಕಿ, ಅಲ್ಲಿಂದ ನೇರಮನೆಗೆ ಬಂದು ಕಾರಿನಲ್ಲಿದ್ದ ರಕ್ತದ ಕಲೆಗಳನ್ನು ನೀರಿನಿಂದ ತೊಳೆದು ಬಟ್ಟೆ ಬರೆಗಳನ್ನು ಬಕೆಟ್ ನೀರಿನಲ್ಲಿ ಹಾಕಿ ತೊಳೆದು ಪ್ರಕರಣದ ಸಾಕ್ಷ್ಯ ನಾಶ ಮಾಡಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಸಿದ್ದೀಕ್ ರಫೀಕ್‌ನನ್ನು ಕೊಲೆಗೈದ ಬಳಿಕ ಮುಂದೇನು ಮಾಡಬೇಕೆಂದು ತೋಚದೆ ಹೆದರಿ ಮಿತ್ರನಿಗೆ ಕರೆ ಮಾಡಿದ್ದ. ವಿಷಯವನ್ನು ಪತ್ತೆ ಹಚ್ಚಿದ ಪೊಲೀಸರು ಚಾಣಾಕ್ಷತನದಿಂದ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ತಸಿಕ್ತವಾಗಿದ್ದ ಬಟ್ಟೆಯನ್ನು ಆರೋಪಿ ಸಿದ್ದೀಕ್ ಮನೆಗೆ ತೆಗೆದುಕೊಂಡು ಹೋಗಿ ತೊಳೆದು ಶುಚಿಗೊಳಿಸಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್, ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ ನಾಗರಾಜ್, ಪುಂಜಾಲಕಟ್ಟೆ ಠಾಣಾ ಎಸ್. ಐ ಕುಟ್ಟಿ ಎಂ, ಬಂಟ್ವಾಳ ಠಾಣಾ ಎಸ್. ಐ ಪ್ರಸನ್ನ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.