ಹತ್ಯಡ್ಕ: ಇಲ್ಲಿಯ ಅರೆಕ್ಕಲ್ ಮಹಾದೇವ ಭಟ್ ಎಂಬವರ ಮನೆಯಲ್ಲಿ ಸಾಕುತ್ತಿದ್ದ ಎಮ್ಮೆಯನ್ನು ಯಾರೂ ದುಷ್ಕರ್ಮಿಗಳು ಗುಂಡು ಹೊಡೆದು ಹತ್ಯೆಗೈದ ಘಟನೆ ಸೆ.7 ರಂದು ಬೆಳಕಿಗೆ ಬಂದಿದೆ. ಮಹಾದೇವ ಭಟ್ ರವರು ಪ್ರತಿ ದಿನವೂ ಸಂಜೆ ತಮ್ಮ ಮನೆಯಲ್ಲಿ ಸಾಕುತ್ತಿದ್ದ ಎಮ್ಮೆಯ ಹಾಲು ಕರೆದು ಮೇಯಲು ಬಿಡುತ್ತಿದ್ದರು. ಹುಲ್ಲನ್ನು ಮೇಯ್ದು ಹೊಟ್ಟೆ ತುಂಬಿದ ನಂತರ ರಾತ್ರಿ ವೇಳೆ ಎಮ್ಮೆ ಹಟ್ಟಿಗೆ ಬರುತ್ತಿತ್ತು.
ಎಂದಿನಂತೆ ಸೆ.6 ರಂದು ಸಂಜೆ ಹಾಲು ಕರೆದು ಮೇಯಲು ಬಿಟ್ಟ ಎಮ್ಮೆ ಮರುದಿನ ಬೆಳಗ್ಗಿನ ಜಾವದವರೆಗೂ ಮರಳಿ ಬಾರದೆ ಇರುವುದನ್ನು ಕಂಡು ಮನೆಯವರು ಎಮ್ಮೆಗಾಗಿ ಹುಡುಕಾಟ ನಡೆಸಿದ್ದ ವೇಳೆ ಹತ್ಯಡ್ಕ ಗ್ರಾಮದ ಫಲಸ್ತಡ್ಕ ಎಂಬಲ್ಲಿ ರಸ್ತೆ ಬದಿಯಿರುವ ಚರಂಡಿಯಲ್ಲಿ ಎಮ್ಮೆಯ ಮೃತದೇಹ ಪತ್ತೆಯಾಗಿದೆ.
ಈ ವೇಳೆ ಎಮ್ಮೆಯ ಮೃತ ಶರೀರದಲ್ಲಿ ಎರಡು ಗುಂಡುಗಳು
ಪತ್ತೆಯಾಗಿದ್ದು, ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಎಮ್ಮೆಯ ಮರಣೋತ್ತರ
ಪರೀಕ್ಷೆಯನ್ನು ನಡೆಸಲಾಗಿದೆ. ಯಾರೋ ಕಿಡಿಗೇಡಿಗಳು ಪ್ರಾಣಿಗಳನ್ನು ಬೇಟೆಯಾಡುವ ಸಂದರ್ಭದಲ್ಲಿ ಈ ಗುಂಡು ತಗುಲಿದೆಯೇ ಅಥವಾ ಉದ್ದಶಪೂರ್ವಕವಾಗಿ ಎಮ್ಮೆಯನ್ನು ಹತ್ಯೆಗೈಯ್ಯಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.