ಬೆಳ್ತಂಗಡಿ: ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮತ್ತು ಇತರ ಪೊಲೀಸರು ಯುವ ವಕೀಲರಾದ ಕುಲದೀಪ್ ಶೆಟ್ಟಿ ಎಂಬವರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ, ಕಾನೂನು ಉಲ್ಲಂಘಿಸಿದ ಸಬ್ ಇನ್ಸ್ಪೆಕ್ಟರ್ ಹಾಗೂ ಸಂಬಂಧಪಟ್ಟ ಪೊಲೀಸರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಡಿ.8ರಂದು ಬೆಳ್ತಂಗಡಿ ವಕೀಲರ ಸಂಘದಿಂದ ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಯಿತು.
ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುತ್ತಿರುವ ವಕೀಲರಾದ ಕುಲದೀಪ್ ಶೆಟ್ಟಿ ಎಂಬವರ ಮೇಲೆ ಪುಂಜಾಲಕಟ್ಟೆ ಠಾಣೆಯ ಸಬ್ ಇನ್ಸ್ಪೆಕ್ಟರ್ ಮತ್ತು ಇತರ ಪೊಲೀಸರು ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿ ಸುಳ್ಳು ದೂರನ್ನು ದಾಖಲಿಸಿಕೊಂಡು ರಾತ್ರಿ ವೇಳೆ ವಕೀಲರ ಮನೆಗೆ ನುಗ್ಗಿ ಅವರನ್ನು ಬಟ್ಟೆ ಹಾಕಿಕೊಳ್ಳಲು ಬಿಡದೆ ಬಲತ್ಕಾರವಾಗಿ ಬಂಧಿಸಿರುವ ಕ್ರಮವನ್ನು ಬೆಳ್ತಂಗಡಿ ವಕೀಲರ ಸಂಘ ಸರ್ವ ಸದಸ್ಯರು ತೀವ್ರವಾಗಿ ಖಂಡಿಸುತ್ತೇವೆ, ಕಾನೂನು ಉಲ್ಲಂಘಿಸಿದ ಸಬ್ ಇನ್ಸ್ಪೆಕ್ಟರ್ ಮತ್ತು ಸಂಬಂಧಪಟ್ಟ ಪೊಲೀಸರನ್ನು ವಜಾಗೊಳಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಎಸ್, ಕಾರ್ಯದರ್ಶಿ ಶೈಲೇಶ್ ಆರ್. ಠೋಸರ್ ಮಾತನಾಡಿ ಘಟನೆಯನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಗಣೇಶ್ ಗೌಡ, ಕೋಶಾಧಿಕಾರಿ ಹರಿಪ್ರಕಾಶ್ ಪಿ.ಎನ್, ಜೊತೆ ಕಾಯ೯ದಶಿ೯, ಪ್ರಿಯಾಂಕ ಕೆ, ಪದಾಧಿಕಾರಿಗಳಾದ ಮುಮ್ತಾಝ್ ಬೇಗಂ, ಶಿವಕುಮಾರ್ ಎಸ್ ಎಮ್, ಶ್ರೀನಿವಾಸ ಗೌಡ, ಶಿವಯ್ಯ ಎಸ್ ಎಲ್, ಶುಭಾಷಿಣಿ ಎ, ಅಶೋಕ್ ಕರಿಯನೆಲ, ಸೇವಿಯರ್ ಪಾಲೇಲಿ, ಮನೋಹರ್ ಇಳಂತಿಲ ಸೇರಿದಂತೆ ವಕೀಲರ ಸಂಘದ ಸದಸ್ಯರು ಭಾಗವಹಿಸಿದ್ದರು. ನಂತರ ತಹಶೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.