ಬೆಳ್ತಂಗಡಿ: ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಕಂಬಳದಲ್ಲಿ ಕೋಣಗಳನ್ನು ಓಡಿಸುತ್ತ, ಪ್ರೇಕ್ಷಕರನ್ನು ರೋಮಾಂಚನಗೊಳಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಮರೋಡಿ ಗ್ರಾಮದ ಶ್ರೀಧರ ಕುಲಾಲ್ ಅವರ ಸಾಧನೆಯನ್ನು ಗುರುತಿಸಿ, ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ೨೦೨೨ನೇ ಸಾಲಿನ ಪ್ರತಿಷ್ಠಿತ “ಕ್ರೀಡಾ ರತ್ನ” ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಗ್ರಾಮೀಣ ಪ್ರದೇಶವಾದ ಮರೋಡಿಯಲ್ಲಿ ತನ್ನ ಸ್ವಂತ ಜಾಗದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ೩೬ ವರ್ಷ ಪ್ರಾಯದ ಶ್ರೀಧರ ಕುಲಾಲ್ ತನ್ನ ಗದ್ದೆಯಲ್ಲಿ ಕೋಣಗಳನ್ನು ಓಡಿಸುತ್ತಾ ಇದರಲ್ಲಿ ಅನುಭವನ್ನುಗಳಿಸಿ, ಕಂಬಳದ ಕರೆಗೆ ತಲುಪಿದವರು. ಮೂಡುಬಿದ್ರೆಯ ಪನೋಳಿಬೈಲು ಕಂಬಳದಲ್ಲಿ ಕಂಬಳ ಓಟದ ಕರೆಗೆ ಪದಾರ್ಪಣೆ ಮಾಡಿದ ಇವರು ಈಗ ಕಂಬಳದ ನಾಲ್ಕು ವಿಭಾಗಗಳಲ್ಲೂ ಕೋಣಗಳನ್ನು ಓಡಿಸುವ ಪ್ರವೀಣ್ಯತೆಯನ್ನು ಪಡೆದುಕೊಂಡಿದ್ದಾರೆ. ಕಂಬಳ ಕ್ಷೇತ್ರದಲ್ಲಿ ಆಗಣ್ಯ ಸಾಧನೆಯನ್ನು ಮಾಡಿ ಯಶಸ್ವಿ ಕ್ರೀಡಾಪಟುವಾಗಿ ಹೊರ ಹೊಮ್ಮಿದ ಇವರನ್ನು ಸರ್ಕಾರ ಗುರುತಿಸಿ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇವರು ಮರೋಡಿ ಗ್ರಾಮದ ಕೈಪಂದೋಡಿ ಬಾಬು ಮೂಲ್ಯ ಮತ್ತು ಸುಶೀಲ ದಂಪತಿ ಪುತ್ರರಾಗಿದ್ದಾರೆ.