ಬೆಳ್ತಂಗಡಿ: ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ರಕ್ತಸ್ರಾವ ಉಂಟಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸುತ್ತಿರುವ ವೇಳೆ ಬಾಣಂತಿ ಮಹಿಳೆ ಸಾವನ್ನಪ್ಪಿದ್ದ ಘಟನೆ ಆ.9ರಂದು ನಡೆದಿದೆ.
ಕರಾಯ ಗ್ರಾಮದ ನಿವಾಸಿ ಉದಯ ನಾಯ್ಕ್ ಎಂಬವರ ಪತ್ನಿ, ಮುಂಡಾಜೆ ಗ್ರಾಮದ ಕೊಡಂಗೆ ಅಣ್ಣು ನಾಯ್ಕ್ ಅವರ ಪುತ್ರಿ ಸುಜಾತಾ(32ವ) ಅವರು ಮೃತಪಟ್ಟ ಮಹಿಳೆಯಾಗಿದ್ದಾರೆ.
ಸುಜಾತರವನ್ನು ಬದ್ಯಾರ್‌ನ ಖಾಸಗಿ ಆಸ್ಪತ್ರೆಯೊಂದಕ್ಕೆ ಎರಡನೇ ಹೆರಿಗೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಸಿಝೇರಿಯನ್ ಶಸ್ತ್ರಚಿಕಿತ್ಸೆ ನಂತರ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರೆನ್ನಲಾಗಿದೆ. ಬಳಿಕ ಬಾಣಂತಿಗೆ ವಿಪರೀತ ರಕ್ತಸ್ರಾವ ಉಂಟಾಗಿದ್ದು ತಕ್ಷಣ ವೈದ್ಯರು ಮಂಗಳೂರು ಆಸ್ಪತ್ರೆಗೆ ಸಾಗಿಸಲು ಸಲಹೆ ನೀಡಿದರು. ಅದರಂತೆ ಮನೆಯವರು ಆಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸಿದ ವೇಳೆ ಬಾಣಂತಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸುಜಾತಾ ಅವರು ಪುತ್ತೂರಿನಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ ಸಂಸ್ಥೆಯಲ್ಲಿ ಜ್ಞಾನ ವಿಕಾಸ ಸಮನ್ವಯ ಅಧಿಕಾರಿಯಾಗಿ ಕರ್ತವ್ಯದಲ್ಲಿದ್ದರು. ಇತ್ತೀಚೆಗೆ ಹಾಸನ ಜಿಲ್ಲೆಯ ಬೇಳೂರು ಯೋಜನಾ ಕಚೇರಿಯ ವ್ಯಾಪ್ತಿಯ ಜ್ಞಾನ ವಿಕಾಸ ಸಮನ್ವಯ ಅಧಿಕಾರಿಯಾಗಿ ವರ್ಗಾವಣೆ ಹೊಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗರ್ಭಿಣಿಯಾಗಿರುವ ಕಾರಣ ಅವರು ರಜೆಯಲ್ಲಿದ್ದರು. ಪತಿ ಉದಯ ನಾಯ್ಕ್ ಎಸ್.ಕೆ.ಡಿ.ಆರ್.ಡಿ.ಪಿ ಸಂಸ್ಥೆಯ ಹಾಸನ ಜಿಲ್ಲೆಯ ಬೇಳೂರು ಕಚೇರಿಯ ಮ್ಯಾನೇಜರ್ ಅಗಿ ಕರ್ತವ್ಯದಲ್ಲಿದ್ದಾರೆ.
ದಂಪತಿಗೆ ಒಂದು ಗಂಡು ಮಗು ಇದೆ.