ಕ್ರೈಂ ವಾರ್ತೆ

ನಾವೂರಿನಲ್ಲಿ ಪತಿಯನ್ನು ಕತ್ತಿಯಿಂದ ಕಡಿದು ಕೊಲೆಗೈದ ಪತ್ನಿ ಪೊಲೀಸರ ವಶ

ನಾವೂರು: ನಾವೂರು ಗ್ರಾಮದ ಅಬ್ಬನ್‌ಕೆರೆ ಎಂಬಲ್ಲಿ ಮಾನಸಿಕ ಅಸ್ವಸ್ಥ ಪತ್ನಿ ತನ್ನ ಪತಿಯನ್ನು ಕತ್ತಿಯಿಂದ ಕಡಿದು ಕೊಲೆ ನಡೆಸಿದ ಘಟನೆ ಜು.5ರಂದು ರಾತ್ರಿ ವರದಿಯಾಗಿದ್ದು, ಆರೋಪಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಾವೂರು ಗ್ರಾಮದ ಅಬ್ಬನ್‌ಕೆರೆ ಎಂಬಲ್ಲಿಯ ನಿವಾಸಿ ಯೋಹನಾನ್ ಯಾನೆ ಬೇಬಿ (59ವ) ಈ ಘಟನೆಯಲ್ಲಿ ಮೃತಪಟ್ಟವರಾಗಿದ್ದಾರೆ. ಪ್ರಕರಣದ ಆರೋಪಿ ಮಾನಸಿಕ ಅಸ್ವಸ್ಥೆ ಎಲಿಯಮ್ಮ (55ವ) ಎಂಬವರನ್ನು ಬೆಳ್ತಂಗಡಿ ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಬ್ಬನ್‌ಕೆರೆಯಲ್ಲಿ ಪತಿ-ಪತ್ನಿ ವಾಸವಾಗಿದ್ದು, ಎಲಿಯಮ್ಮನವರು ಸುಮಾರು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರಿಗೆ ಮಂಗಳೂರು ಆಸ್ಪತ್ರೆಯಿಂದ ಚಿಕಿತ್ಸೆ ನಡೆಯುತ್ತಿದೆ.


ಜು.5 ರಂದು ಬೆಳಗ್ಗಿನ ಜಾವ ಸುಮಾರು 5.30ಕ್ಕೆ ಮನೆಯ ಕೋಣೆಯ ಒಳಗೆ ಮಂಚದಲ್ಲಿ ಮಲಗಿದ್ದ ಪತಿ ಯೋಹನಾನ್ ಯಾನೆ ಬೇಬಿಯವರಿಗೆ ಎಲಿಯಮ್ಮ ಅವರು ಕತ್ತಿಯಿಂದ ಕಡಿದಿದ್ದು, ತಲೆಯ ಭಾಗಕ್ಕೆ ಕತ್ತಿನ ಗಂಭೀರ ಏಟು ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿದ ಸ್ಥಳೀಯರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಎಲಿಯಮ್ಮ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

ನಿಮ್ಮದೊಂದು ಉತ್ತರ