ಕುಲಾಲ ಭವನ ಸ್ವಾಭಿಮಾನದ ಸಂಕೇತ: ಹರೀಶ್ ಕಾರಿಂಜ
ಅಳದಂಗಡಿ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ಇದರ `ನೂತನ ಕುಲಾಲಭವನ ‘ನಿರ್ಮಾಣದ ಹಿನ್ನಲೆಯಲ್ಲಿ ಅಳದಂಗಡಿ ವಯದ ಸಮಾಲೋಚನಾ ಸಭೆ ಜೂ.19ರಂದು ಪದ್ಮನಾಭ ಕುಲಾಲ್ ಅಳದಂಗಡಿ ಇವರ ಮನೆ ದುರ್ಗಾ ನಿಲಯದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ವಹಿಸಿ, ಬೆಳ್ತಂಗಡಿ ಕ್ಷೇತ್ರದ ಶಾಸಕರು ಪ್ರಥಮ ಹಂತದಲ್ಲಿ ರೂ.5ಲಕ್ಷ ನಂತರ 25 ಲಕ್ಷ ಅನುದಾನವನ್ನು ನೀಡಿದ್ದು, ಇದರಲ್ಲಿ ನಿಮ್ಮೆಲ್ಲರ ಸಲಹೆ, ಸೂಚನೆಯಂತೆ ಕುಲಾಲ ಮಂದಿರದ ಅಭಿವೃದ್ಧಿ
ಮಾಡಲಾಗಿದೆ. ಶಾಸಕರು ಈಗ ನೂತನ ಕುಲಾಲ ಭವನ ನಿರ್ಮಾಣಕ್ಕೆ ರೂ.1.50 ಕೋಟಿ ಮಂಜೂರು ಮಾಡಿದ್ದಾರೆ. ಇದರ ನಿರ್ಮಾಣಕ್ಕೆ 37 ಸೆಂಟ್ಸ್ ಜಾಗ ಖರೀದಿಗೆ ನಿರ್ಧರಿಸಲಾಗಿದೆ. ಕುಲಾಲ ಭವನ ಈ ಸಮಾಜದ ಸ್ವಾಭಿಮಾನದ ಸಂಕೇತವಾಗಿದ್ದು, ಈ ಕಾರ್ಯಕ್ಕೆ ಎಲ್ಲರ ಸಹಕಾರ ಬೇಕಾಗಿದೆ ಎಂದು ತಿಳಿಸಿದರು.
ಕಟ್ಟಡ ಸಮಿತಿ ಅಧ್ಯಕ್ಷ ನೇಮಯ್ಯ ಹನೈನಡೆ ಅವರು ಮಾತನಾಡಿ ತಾಲೂಕಿನ ಸಮಾಜ ಬಾಂಧವರು ಸಂಘಟಿತರಾಗಿ, ಕುಲಾಲ ಭವನ ನಮ್ಮ ಭವನ ಎಂಬ ಭಾವನೆಯಿಂದ ಪೂರ್ಣ ಸಹಕಾರ ನೀಡುವಂತೆ ಕರೆ ನೀಡಿದರು. ಸಂಘದ ಕೋಶಾಧಿಕಾರಿ ಯತೀಶ್ ಸಿರಿಮಜಲು ಅವರು ಸಾಂತ್ವಾನ ನಿಧಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕಟ್ಟಡ ಸಮಿತಿ ಕಾರ್ಯದರ್ಶಿ ಜಗನ್ನಾಥ್ ಕುಲಾಲ್ ಪ್ರಸ್ತಾವಿಕವಾಗಿ ಮಾತನಾಡಿ ನೂತನ ಕುಲಾಲ ಭವನ ನಿರ್ಮಾಣ ಮತ್ತು ಅದಕ್ಕೆ ಬೇಕಾದ ಜಾಗ ಖರೀದಿಯ ಬಗ್ಗೆ ವಿವರ ನೀಡಿದರು.
ಈ ಸಂದರ್ಭದಲ್ಲಿ ಅಳದಂಗಡಿ ವಲಯ ವ್ಯಾಪ್ತಿಗೆ ಒಳ ಪಟ್ಟ ಗ್ರಾಮಗಳ ಸಮಿತಿ ರಚಿಸಲಾಯಿತು.
ವೇದಿಕೆಯಲ್ಲಿ ಕುಲಾಲ ಯುವ ವೇದಿಕೆ ಅಧ್ಯಕ್ಷ ಉಮೇಶ್ ಕುಲಾಲ್, ಲೋಕೇಶ್ ಕುಲಾಲ್ ಗುರುವಾಯನಕೆರೆ, ಶಾಂತಪ್ಪ ಕಲಿಕ, ಪದ್ಮನಾಭ ಕುಲಾಲ್, ಹರೀಶ್ ಮುಂಡೂರು, ಗ್ರಾ.ಪಂ ಸದಸ್ಯೆ ಶೋಭಾ ಮೊದಲಾದವರು ಉಪಸ್ಥಿತರಿದ್ದರು. ಅಳದಂಗಡಿ ವಲಯದ ಹತ್ತು ಗ್ರಾಮಗಳ ಸಮಾಜ ಬಾಂಧವರು ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿದರು.
ಪಂಚಮಿ ಮತ್ತು ಪವಿತ್ರ ಬಳಗದವರ ಪ್ರಾರ್ಥನೆ ಬಳಿಕ ಶ್ರೀಮತಿ ಗುಲಾಬಿ ಟೀಚರ್ ಸ್ವಾಗತಿಸಿದರು. ಶಿಕ್ಷಕ ನಾಗಭೂಷಣ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ಸತೀಶ್ ಬಂಗೇರ ಧನ್ಯವಾದವಿತ್ತರು.