ಗದಗದಲ್ಲಿ ಆರೋಪಿ ವಶ-ಪತ್ತೆ ಹಚ್ಚಿದ ಧರ್ಮಸ್ಥಳ ಪೊಲೀಸರಿಗೆ ವಿಶೇಷ ಬಹುಮಾನ ಘೋಷಣೆ
ಧರ್ಮಸ್ಥಳ: ಇಲ್ಲಿಯ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀಕ್ಷೇತ್ರ ಸೌತಡ್ಕಕ್ಕೆ ದೇವರ ದರ್ಶನಕ್ಕೆ ಬಂದ ಬೆಳ್ತಂಗಡಿ ಮೂಲದ ಮುಂಬೈ ನಿವಾಸಿಯಾದ ಬಾಲಚಂದ್ರ ಡಿ ಎಂಬುವವರ ಪತ್ನಿ ಬ್ಯಾಗ್‌ನಿಂದ ಕಳೆದ ರೂ.3.08 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಧರ್ಮಸ್ಥಳದ ಆರೋಪಿ ಸಹಿತ ವಶಪಡಿಸಿಕೊಂಡ ಘಟನೆ ವರದಿಯಾಗಿದೆ.
ಗದಗ ತಾಲೂಕಿನ ಬೆಟಗೇರಿ ಸಬ್‌ಜೈಲ್ ರಸ್ತೆಯ ಕುಷ್ಟಗಿಚಾಲ್ ನಿವಾಸಿ ವೃದ್ದೆ ಶ್ರೀಮತಿ ಭೀಮವ್ವ @ ನಾಗಮ್ಮ (63 ವರ್ಷ) ಬಂಧಿತ ಆರೋಪಿ, ತನಿಖೆ ನಡೆಸಿದ ಆರೋಪಿಯಿಂದ ಕಳವು ಮಾಡಿದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ:
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕಡ ಗ್ರಾಮದ ಶ್ರೀಕ್ಷೇತ್ರ ಸೌತಡ್ಕಕ್ಕೆ ದೇವರ ದರ್ಶನ ಪಡೆಯಲು ಬೆಳ್ತಂಗಡಿ ಮೂಲದ ಮುಂಬೈ ನಿವಾಸಿ ಬಾಲಚಂದ್ರ ಡಿ. ಅವರು ಕಳೆದ ಎರಡು ತಿಂಗಳ ಹಿಂದೆ ಎ.20ರಂದು ಕುಟುಂಬ ಸಮೇತ ಬಂದಿದ್ದರು. ಶ್ರೀ ಗಣಪತಿ ದೇವರ ಸೇವೆ ಮತ್ತು ದರ್ಶನವನ್ನು ಪಡೆದು ತೀರ್ಥ,ಪ್ರಸಾದವನ್ನು ಪಡೆಯಲು ಸರತಿ ಸಾಲಿನಲ್ಲಿ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಪತ್ನಿಯ ಕೈಯಲ್ಲಿದ್ದ ಬ್ಯಾಗಿನ ಜಿಪ್‌ನನ್ನು ತೆರೆದು ಅದರೊಳಗಿದ್ದ ಚಿನ್ನಾಭರಣದ ಪರ್ಸ್‌ನನ್ನು ಯಾರೋ ಕಳ್ಳತನ ಮಾಡಿದ್ದರು. ಈ ಬಗ್ಗೆ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅವರು ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಅ.ಕ್ರ 30/2022 ಕಲಂ: 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಧರ್ಮಸ್ಥಳ ಪೊಲೀಸ್ ಉಪನಿರೀಕ್ಷಕರಾದ ಕೃಷ್ಣಕಾಂತ ಎ. ಪಾಟೀಲ್ ನೇತೃತ್ವದ ವಿಶೇಷ ತಂಡ ವಿವಿಧ ಮೂಲಗಳಿಂದ ತನಿಖೆ ನಡೆಸಿ ಆರೋಪಿ ಶ್ರೀಮತಿ ಭೀಮವ್ವ @ ನಾಗಮ್ಮ ಅವರ ಸ್ವಂತ ಮನೆಯಾದ ಕುಷ್ಟಗಿಚಾಲ್ ಮನೆ ಜೈಲ್ ರೋಡ್ ಬೆಟಗೇರಿ ಗದಗ ತಾಲೂಕು ಗದಗ ಸಬ್ ಎಂಬಲ್ಲಿನ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಸೋತ್ತುಗಳ ವಶ: ಆರೋಪಿಯಿಂದ ರೂ. 1,56 ಲಕ್ಷ ಮೌಲ್ಯದ 1 ವಜ್ರದ ನೆಕ್ಲೇಸ್, ರೂ.15 ಸಾವಿರ ಮೌಲ್ಯದ 1 ಉಂಗುರ, ರೂ. 20 ಸಾವಿರ ಮೌಲ್ಯದ ಇನ್ನೊಂದು ಉಂಗುರ, ರೂ. ರೂ.1,17,500 ಮೌಲ್ಯದ 1 ಜೊತೆ ಜುಮುಕಿಯನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡು ಚಿನ್ನಭರಣಗಳ ಒಟ್ಟು ಮೌಲ್ಯ ರೂ. 3,08,500 ಎಂದು ಅಂದಾಜಿಸಲಾಗಿದೆ.
ಆರೋಪಿಯು ವಿವಿಧ ಯಾತ್ರಾ ಸ್ಥಳಗಳಿಗೆ ತೆರಳಿ ಕಳ್ಳತನ ಮಾಡುವ ಕೃತ್ಯವನ್ನು ನಡೆಸುತ್ತಿದ್ದು, ಆರೋಪಿಯ ಮೇಲೆ ಮುರುಡೇಶ್ವರ, ಭಟ್ಕಳ, ಸುಬ್ರಮಣ್ಯ ಮೊದಲಾದ ಕಡೆ ಕಳ್ಳತನ ಪ್ರಕರಣ ದಾಖಲಾಗಿರುವುದಾಗಿ ತನಿಖೆ ವೇಳೆ ಗೊತ್ತಾಗಿದೆ.
ಸದ್ರಿ ಪತ್ತೆ ತಂಡದಲ್ಲಿ ಪೊಲೀಸ್ ಅಧೀಕ್ಷಕರು ಆರ್‌ಶೀಕೇಶ್ ಸೋನಾವಣೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕುಮಾರ್ ಚಂದ್ರ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರು ಬಂಟ್ವಾಳ ಉಪವಿಭಾಗ ಶಿವಾಂಶು ರಜಪೂತ್ ಮತ್ತು ಪೊಲೀಸ್ ವೃತ್ತ ನಿರೀಕ್ಷಕರು ಬೆಳ್ತಂಗಡಿ ವೃತ್ತ ಶಿವಕುಮಾರ್ ನೇತೃತ್ವದಲ್ಲಿ ಎಸ್‌ಐ ಕೃಷ್ಣಕಾಂತ ಎ. ಪಾಟೀಲ್ ರವರ ವಿಶೇಷ ತಂಡದ ಸಿಬ್ಬಂದಿಗಳಾದ ಹೆಚ್.ಸಿಗಳಾದ ಬೆನ್ನಿಚ್ಚನ್, ಪ್ರಶಾಂತ್, ರಾಹುಲ್, ಸತೀಶ ನಾಯ್ಕ ಜಿ, ಶೇಖರ್, ಕೃಷ್ಣಪ್ಪ, ರವೀಂದ್ರ ಪಿ.ಸಿ ಅನಿಲ್ ಕುಮಾರ್, ಚಾಲಕ ಎಪಿಸಿ ಲೋಕೇಶ್, ಮಾಪಿಸಿ ಸೌಭಾಗ್ಯ ಮತ್ತು ಜಿಲ್ಲಾ ಗಣಕ ಯಂತ್ರ ವಿಭಾಗದ ಸಂಪತ್ ಮತ್ತು ದಿವಾಕರರವರು ಭಾಗವಹಿಸಿದ್ದರು. ಈ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸ್ ತಂಡಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಅಧಿಕಾರಿ ಬಹುಮಾನವನ್ನು ಘೋಷಿಸಿದ್ದಾರೆ.