ಪದ್ಮುಂಜ: ಕಳೆದ ವಾರ ಕೊಲ್ಲಾಜೆ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಆರಂಭ ವಾ ದ ಬಾರ್ & ರೆಸ್ಟೋರೆಂಟ್ ಮುಚ್ಚುವಂತೆ ಜನ ಜಾಗೃತಿ ವೇದಿಕೆ ಮಹಿಳಾ ಸಂಘಟನೆ, ಶಾಲಾಭಿವೃದ್ಧಿ ಸಮಿತಿಯವರು ಗ್ರಾಮ ಪಂಚಾಯತಕ್ಕೆ ಮನವಿ ಸಲ್ಲಿಸಿದ ಬೆನ್ನಲ್ಲೇ, ಇನ್ನೊಂದೆಡೆ ಮದ್ಯಪ್ರಿಯರು ಪದ್ಮುಂಜದಲ್ಲಿ ಬಾರ್ ಮತ್ತು ಮದ್ಯದಂಗಡಿ ಬೇಕೇ ಬೇಕು ಎಂದು ಆಗ್ರಹಿಸಿ ಜು.20 ರಂದು ಕಣಿಯೂರು ಗ್ರಾಮ ಪಂಚಾಯತಕ್ಕೆ ಮನವಿ ನೀಡಿದರು.
ಕೂಲಿ ಕಾರ್ಮಿಕರಿಗೆ ದೂರದ ಊರುಗಳಿಗೆ ಹೋಗಿ ಮದ್ಯ ಖರೀದಿಸಲು ಬಹಳ ತೊಂದರೆಯಾಗುತ್ತಿದೆ. ಅಕ್ರಮ ಮದ್ಯ ಮಾರಾಟಗಾರರು ದುಬಾರಿ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಬಡ ಕಾರ್ಮಿಕರಿಗೆ ನಷ್ಟವಾಗುತ್ತಿದೆ. ಆದುದರಿಂದ ಪದ್ಮುಂಜದಲ್ಲಿಯೇ ಮದ್ಯದಂಗಡಿಯಿದ್ದರೆ ಕೂಲಿ ಕಾರ್ಮಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ಒತ್ತಾಯಿಸಿ, ಮದ್ಯದಂಗಡಿ ಬೇಕೇ ಬೇಕು ಎಂದು ಆಗ್ರಹಿಸಿದರು. ನಂತರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಪಿಡಿಒ ಪೂರ್ಣಿಮಾರವರು ಮನವಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಗಾಯತ್ರಿ, ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.