ಬೆಳ್ತಂಗಡಿ: ಇತ್ತೀಚೆಗೆ ಸರಕಾರ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣಾ ಮೀಸಲಾತಿ ಪಟ್ಟಿಯನ್ನು ಪ್ರಕಟಗೊಳಿಸಿದ್ದು, ಇದು ತೀರಾ ಅವೈಜ್ಞಾನಿಕವಾಗಿದೆ. ತಾಲೂಕಿನ ತಾ.ಪಂ ಮತ್ತು ಜಿ.ಪಂ ಕ್ಷೇತ್ರಗಳಲ್ಲಿ ಪ.ಜಾತಿ ಮತ್ತು ಪ.ಪಂಗಡಗಳ ಅಭ್ಯರ್ಥಿಗಳಿಗೆ ಒಂದೇ ಒಂದು ಸ್ಥಾನವನ್ನುಮೀಸಲಿಡದೆಆಸಮುದಾಯದವರಿಗೆ ಬೆಳ್ತಂಗಡಿ ಶಾಸಕರು ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಆರೋಪಿಸಿದರು.
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ವತಿಯಿಂದ ಜು.6ರಂದು ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ತಾಲೂಕು ಶಾಸಕ ಹರೀಶ್ ಪೂಂಜರವರ ಅಣತಿಯಂತೆ ಸಂಬಂಧಪಟ್ಟ ಅಧಿಕಾರಿಗಳು ಮೀಸಲಾತಿಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದು, ತಾಲೂಕಿನಲ್ಲಿ ಪ.ಜಾತಿ ಮತ್ತು ಪ.ಪಂಗಡಕ್ಕೆ ಸೇರಿದ ಸುಮಾರು 4೦ ಸಾವಿರ ಜನಸಂಖ್ಯೆ ಇದ್ದರೂ ಈ ರೀತಿಯ ತಾರತಮ್ಯ ಎಸಗಿರುವುದು ಖಂಡನಾರ್ಹ. ಈ ಮೀಸಲಾತಿ ಪಟ್ಟಿಯನ್ನು ತಕ್ಷಣವೇ ರದ್ದುಪಡಿಸಿ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಸರಕಾರಕ್ಕೆ, ದ.ಕ. ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ತೈಲ ಬೆಲೆ ಏರಿಕೆಯನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ವತಿಯಿಂದ ನಾಳೆ(ಜು.7) ಬೃಹತ್ ಸೈಕಲ್ ಜಾಥಾ ಮತ್ತು ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಉಜಿರೆ ಪಿ.ಸಿ ಪೈ ಪೆಟ್ರೋಲ್ ಬಂಕ್ ಬಳಿಯಿಂದ ಪ್ರಾರಂಭಿಸಿ ಬೆಳ್ತಂಗಡಿ ಹಳೆಕೋಟೆಯ ಮಹಾವೀರ ಸರ್ವೀಸ್ ಸ್ಟೇಷನ್ವರೆಗೆ ಜಾಥಾ ನಡೆಸಲಾಗುವುದು. ಜು.11ರಂದು ಪಕ್ಷದ ವತಿಯಿಂದ ಬೆಳ್ತಂಗಡಿ ಗುರುನಾರಾಯಣ ಸಭಾಂಗಣದಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನದವರೆಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದ್ದು ಎಲ್ಲರೂ ಸಹಕರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ವಕ್ತಾರರಾದ ನ್ಯಾಯವಾದಿ ಮನೋಹರ ಇಳಂತಿಲ, ಕೇಶವ ಪಿ ಬೆಳಾಲು, ಎಸ್.ಸಿ ಘಟಕದ ಅಧ್ಯಕ್ಷ ಬಿ.ಕೆ ವಸಂತ, ಮಾಜಿ ಅಧ್ಯಕ್ಷ ಚಂದು ಎಲ್, ಪ್ರಮುಖರಾದ ಪ್ರಭಾಕರ ಶಾಂತಿಕೋಡಿ, ರವಿ ಇಂದಬೆಟ್ಟು, ಬೇಬಿ ಸುವರ್ಣ ಮಾಲಾಡಿ ಮೊದಲಾದವರು ಉಪಸ್ಥಿತರಿದ್ದರು.
*ಜಿ.ಪಂ, ತಾ.ಪಂ. ಚುನಾವಣೆಯ ಮೀಸಲಾತಿ ಪಟ್ಟಿ ಅವೈಜ್ಞಾನಿಕ
*ಪ.ಜಾತಿ, ಪ.ಪಂಗಡಕ್ಕೆ ಯಾವುದೇ ಸ್ಥಾನ ನೀಡಿದೆ ಶಾಸಕರಿಂದ ಅನ್ಯಾಯ*
*ಮಾಜಿ ಶಾಸಕ ವಸಂತ ಬಂಗೇರ ಆರೋಪ*